ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಶೀಘ್ರದಲ್ಲೇ ಸಮಾವೇಶ ಮಾಡುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಬಾಗಲಕೋಟೆ ಜಿಲ್ಲಾ ಮುಖಂಡರ ಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಗೌಡರು, ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ನೆಲೆ ಇಲ್ಲ. ಆದರೆ ಈಗ ನಾನು ಸುಮ್ಮನೆ ಕೂರುವುದಿಲ್ಲ. ಉತ್ತರ ಕರ್ನಾಟಕಕ್ಕೆ ನನ್ನ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಕೊಡುಗೆ ಹೆಚ್ಚಿದೆ. ಆದರೆ ಆ ಭಾಗದ ಜನ ನಮ್ಮ ಪಕ್ಷದ ಮೇಲೆ ಅದ್ಯಾಕೋ ಪ್ರೀತಿ ತೋರಿಸುತ್ತಿಲ್ಲ ಎಂದು ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಉತ್ತರ, ದಕ್ಷಿಣ ಅಂತ ಭೇದ ಭಾವ ಮಾಡಿಲ್ಲ. ಅವರು ಉತ್ತರ ಕರ್ನಾಟಕಕ್ಕೆ ಅನೇಕ ಯೋಜನೆ ಕೊಟ್ಟರು. ಸಾಕಷ್ಟು ಹಣ ಸಹ ಬಿಡುಗಡೆ ಮಾಡಿದ್ದರು. ಆದರೂ ಜನ ಮಾತ್ರ ಜೆಡಿಎಸ್ ಕೈಹಿಡಿಯುವುದಿಲ್ಲ. ಈ ಬಗ್ಗೆ ನನಗೆ ನೋವಿದೆ ಎಂದು ಬಾಗಲಕೋಟೆ ಜಿಲ್ಲೆಯ ಮುಖಂಡರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾನು ಉತ್ತರ ಕರ್ನಾಟಕದ ಜನರನ್ನು ಯಾವತ್ತು ದೂಷಿಸುವುದಿಲ್ಲ. ಸದ್ಯ ನೆರೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಇದೆಲ್ಲವು ಸರಿ ಹೋದ ಮೇಲೆ ಉತ್ತರ ಕರ್ನಾಟಕದಲ್ಲಿ 2 ರಿಂದ 3 ಸಮಾವೇಶ ಮಾಡುತ್ತೇನೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಹಾಗೂ ರೈತರ ಸಮಾವೇಶವನ್ನು ಉತ್ತರ ಕರ್ನಾಟಕದಲ್ಲೇ ನಡೆಸುತ್ತೇನೆ ಎಂದು ದೇವೇಗೌಡರು ಸಭೆಯಲ್ಲಿ ತಿಳಿಸಿದ್ದಾರೆ.
ಮುಖಂಡರು, ಕಾರ್ಯಕರ್ತರು ಪಕ್ಷದ ಜೊತೆ ಕೈ ಜೋಡಿಸಿ ಪಕ್ಷಕ್ಕಾಗಿ ದುಡಿಯಬೇಕು. ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ದೊಡ್ಡದಾಗಿ ಬೆಳೆಯಬೇಕು. ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕೆಂದು ಮುಖಂಡರಿಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ದೇವೇಗೌಡರು ವಿಜಯಪುರ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ ಮುಖಂಡರೊಂದಿಗೆ ಸಭೆ ನಡೆಸಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕೈಗೊಂಡಿದ್ದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.