ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಹೆಚ್. ಡಿ. ದೇವೇಗೌಡ ಅವರು ಇಂದು ತಮ್ಮ 91 ನೇ ವರ್ಷದ ಹುಟ್ಟುಹಬ್ಬವನ್ನು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಗೌಡರು ಹುಟ್ಟುಹಬ್ಬ ಆಚರಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಚಿವ ಹೆಚ್. ಡಿ. ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಜೆಡಿಎಸ್ ಮುಖಂಡರು ಹಾಗೂ ಹಲವಾರು ಗಣ್ಯರು ದೇವೇಗೌಡರ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಸೋತ ಬಹುತೇಕ ಅಭ್ಯರ್ಥಿಗಳು ಗೌಡರ ನಿವಾಸಕ್ಕೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಇಂದು ಬೆಳಗ್ಗೆ ಗೌಡರು ಕುಟುಂಬ ಸದಸ್ಯರ ಜೊತೆ ಜೆ.ಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಾಗಿದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಹಾಗೂ ರಾಜ್ಯ ಸುಭಿಕ್ಷವಾಗಿರಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಮನೆ ಮುಂದೆ ಕೇಕ್ ಕತ್ತರಿಸಿದ ಗೌಡರು: ನಂತರ ಪದ್ಮನಾಭನಗರದ ನಿವಾಸದ ಎದುರು ಜೆಡಿಎಸ್ ಮುಖಂಡರು ತಂದಿದ್ದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ದೇವೇಗೌಡರಿಗೆ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ಜೆಡಿಎಸ್ ಪಕ್ಷದ ಅಧ್ಯಕ್ಷ ರಮೇಶ್ ಗೌಡ, ಮಾಜಿ ಶಾಸಕರು ಶುಭ ಕೋರಿದರು. ಇವರೆಲ್ಲ ದೇವೇಗೌಡರಿಗೆ ಇನ್ನಷ್ಟು ದೀರ್ಘಾಯುಷ್ಯವನ್ನು ನೀಡಲಿ ಎಂದು ದೇವರಲ್ಲಿ ಬೇಡಿಕೊಂಡರು. ಕೇರಳ ರಾಜ್ಯದ ಜೆಡಿಎಸ್ ಪಕ್ಷದ ಮುಖಂಡ ಕೃಷ್ಣ ಕುಟ್ಟಿ ಅವರು ದೇವೇಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲು ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಗೌಡರ ಮನೆಗೆ ಧಾವಿಸಿ ಬಂದಿದ್ದರು. ದೇವದುರ್ಗ ತಾಲೂಕಿನ ಜೆಡಿಎಸ್ ಪಕ್ಷದ ನೂತನ ಶಾಸಕಿ ಕರಿಯಮ್ಮ ಅವರು ದೇವೇಗೌಡರಿಗೆ ಇದೇ ವೇಳೆ ಶುಭಾಶಯ ಕೋರಿದರು.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹಲವು ಕ್ಷೇತ್ರಗಳಲ್ಲಿ ದೇವೇಗೌಡರು ಚುನಾವಣಾ ಪ್ರಚಾರ ಕೈಗೊಂಡಿದ್ದ ರೀತಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬಿತ್ತು. ಚುನಾವಣಾ ಫಲಿತಾಂಶದಲ್ಲಿ ಪಕ್ಷದ ಹಿನ್ನಡೆಯಿಂದ ಯಾರೂ ಎದೆಗುಂದಬೇಡಿ. ಸೋಲು - ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ ಪಕ್ಷ ಸಂಘಟನೆ ಮಾಡುವಂತೆ ಬಹಿರಂಗ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ತುಂಬಿದ್ದಾರೆ. ಈ ಮೂಲಕ ಈ ಇಳಿ ವಯಸ್ಸಿನಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಪಣ ತೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ತನ್ನ ನೆಲೆ ಕಳೆದುಕೊಳ್ಳದಂತೆ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಹಿಡಿದಿಡಲು ದೇವೇಗೌಡರು ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಏಳು-ಬೀಳು ಸಾಮಾನ್ಯ, ಚುನಾವಣೆಗಳನ್ನು ಸಂಘರ್ಷವೆಂದು ತಿಳಿದು ಹೋರಾಡೋಣ'