ಬೆಂಗಳೂರು : 15 ವರ್ಷಗಳ ಬಳಿಕ ನೋಟರಿ ಮಾಡದಂತೆ ಕೇಂದ್ರ ಸರ್ಕಾರ ನೋಟರಿ ಕಾಯ್ದೆ-1952ರ ಸೆಕ್ಷನ್ 5ಕ್ಕೆ ತಿದ್ದುಪಡಿ ಮಾಡುವ ಕ್ರಮ ಕೈಬಿಡುವಂತೆ ಕೋರಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ನೋಟರಿ ಕಾಯ್ದೆ-1952ರ ಸೆಕ್ಷನ್ 5ರ ಪ್ರಸ್ತಾವಿತ ತಿದ್ದುಪಡಿಯನ್ನು ಅಂಗೀಕರಿಸಿ ಜಾರಿಗೊಳಿಸಿದರೆ, ನಮ್ಮ ದೇಶದ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ನೋಟರಿಗಳಿಗೆ ಭರಿಸಲಾಗದ ನಷ್ಟ ಉಂಟಾಗದಲಿದೆ. ಅವರ ಹಿತದೃಷ್ಟಿಯಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.
ನೋಟರಿಗಳ ಅವಧಿಯನ್ನು 5 ವರ್ಷಗಳಿಗೆ ಸೀಮಿತಗೊಳಿಸುವ ಮತ್ತು ನೋಟರಿಗಳ ಪ್ರಾಕ್ಟೀಸ್ ಪ್ರಮಾಣಪತ್ರವನ್ನು ಎರಡು ಅವಧಿಗಷ್ಟೇ ನವೀಕರಿಸುವ ನಿಯಮಗಳು ತರ್ಕಬದ್ಧವಲ್ಲದ ಮತ್ತು ತಪ್ಪು ಕಲ್ಪನೆಗಳಾಗಿವೆ. ನೋಟರಿ ತಿದ್ದುಪಡಿ ಮಸೂದೆಯ ಹೊಸ ನಿಯಮ 15 ವರ್ಷಗಳ ಬಳಿಕ ನೋಟರಿ ಮಾಡುವುದನ್ನು ನಿರ್ಬಂಧಿಸುತ್ತದೆ.
ಇದನ್ನೂ ಓದಿ: ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ್ರೂ ಆತಂಕ ಮಾತ್ರ ದೂರ..
ವಕೀಲರು ನೋಟರಿಯಾಗಿ ಪರಿವರ್ತನೆಯಾದ ಬಳಿಕ ಅದು ಶಾಶ್ವತವಾಗಿರುತ್ತದೆ. ಕಾನೂನು ವೃತ್ತಿಯು ಎಂದಿಗಿಂತ ವೇಗವಾಗಿ ವಿಕಸನಗೊಳ್ಳುತ್ತಿದ್ದು, 15 ವರ್ಷಗಳ ಕಾಲ ನೋಟರಿಯಾಗಿ ಕೆಲಸ ಮಾಡಿದವರು ಸುದೀರ್ಘ ಅವಧಿಯ ಬಳಿಕ ಮತ್ತೆ ವಕೀಲರಾಗಿ ಪರಿಣಿತ ವಕೀಲರ ನಡುವೆ ಕೆಲಸ ಮಾಡುವುದು ಕಷ್ಟ.
ಪ್ರಸ್ತಾವಿತ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ನನಗೆ ಅನುಮಾನಗಳು ಕಾಡುತ್ತಿವೆ. ನೋಟರಿ ಕಾಯ್ದೆ-1952ರ ಸೆಕ್ಷನ್ 5ಕ್ಕೆ ಪ್ರಸ್ತಾಪಿಸಲಾದ ತಿದ್ದುಪಡಿಯು ಸಂವಿಧಾನದ 14, 19, 21 ಮತ್ತು 309ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಎನ್ನಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ನೋಟರಿ ವೆಲ್ಫೇರ್ ಟ್ರಸ್ಟ್ ತಮಗೆ ಪತ್ರ ಬರೆದಿದೆ.
ಆದ್ದರಿಂದ, ದೇಶದಾದ್ಯಂತ ಇರುವ ಎಲ್ಲಾ ನೋಟರಿಗಳ ಹಿತದೃಷ್ಟಿಯಿಂದ ನೋಟರಿ ಕಾಯ್ದೆ-1952 ಸೆಕ್ಷನ್ 5ರ ಪ್ರಸ್ತಾವಿತ ತಿದ್ದುಪಡಿಯನ್ನು ಕೈಬಿಡುವಂತೆ ಹಾಗೂ ನೋಟರಿಗಳ ಮನವಿಯನ್ನು ಪುರಸ್ಕರಿಸುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಕೋರಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ