ದೇವನಹಳ್ಳಿ: ಗಂಡ ಬಿಟ್ಟು ಮಕ್ಕಳೊಂದಿಗೆ ವಾಸವಾಗಿದ್ದ ಮಹಿಳೆಯ ಸಹವಾಸ ಬಯಸಿದ ಯುವಕರಿಬ್ಬರಲ್ಲಿ ಒಬ್ಬನ ಹತ್ಯೆಯಾಗಿದ್ದು, ಮತ್ತೊಬ್ಬ ಜೈಲು ಸೇರಿದ್ದಾನೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಹೊರವಲಯದಲ್ಲಿ ಕಳೆದ ಆಗಸ್ಟ್ 27 ರಂದು ಜಿಮ್ ಟ್ರೈನರ್ ಶಿವಕುಮಾರ್ ಕೊಲೆಯಾಗಿತ್ತು. ಈ ಕೃತ್ಯದ ನಂತರ ಪರಾರಿಯಾಗಿ ಕೋಲಾರದ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅರುಣ್ ಕುಮಾರ್‌ನನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಗಂಡನಿಂದ ದೂರವಾಗಿದ್ದ ನರ್ಸ್, ತನ್ನಿಬ್ಬರು ಮಕ್ಕಳ ಜೊತೆ ವಿಜಯಪುರ ಪಟ್ಟಣದಲ್ಲಿ ವಾಸವಾಗಿದ್ದಳು. ಆಕೆಗೆ ಅರುಣ್ ಕುಮಾರ್ ಎಂಬ ಯುವಕನ ಪರಿಚಯವಾಗಿ ಆತ್ಮೀಯವಾಗಿದ್ದರು. ಒಂದು ವರ್ಷಗಳ ನಂತರ ಆಕೆಯ ಕ್ಲಾಸ್‌ಮೇಟ್ ಶಿವಕುಮಾರ್ ಎಂಬಾತನ ಪರಿಚಯವಾಗಿದೆ. ಈತ ಬೈರಸಂಧ್ರದ ನಿವಾಸಿಯಾಗಿದ್ದು, ವಿಜಯಪುರ ಪಟ್ಟಣದಲ್ಲಿ ಪವರ್ ಹೌಸ್ ಜಿಮ್‌ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಶಿವಕುಮಾರ್ ಮತ್ತು ನರ್ಸ್ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ಇದು ಅರುಣ್ ಕುಮಾರ್ ಕೋಪಕ್ಕೆ ಕಾರಣವಾಗಿ ನರ್ಸ್ನಿಂದ ದೂರ ಇರುವಂತೆ ಎಚ್ಚರಿಕೆ ಸಹ ನೀಡಿದ್ದ. ಅಷ್ಟೇ ಅಲ್ಲದೆ ಮಹಿಳೆಗೋಸ್ಕರ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿತ್ತು.
ಆಗಸ್ಟ್ 27 ರಂದು ಬೆಳಿಗ್ಗೆ ಜಿಮ್ ಬಾಗಿಲು ತೆರೆಯಲು ಶಿವಕುಮಾರ್ ಬರುವಾಗ ದಂಡಿಗಾನಹಳ್ಳಿ ಬಳಿ ಶಿವಕುಮಾರ್ ಬೈಕ್ ಗೆ ತನ್ನ ಬೈಕ್ ನಿಂದ ಡಿಕ್ಕಿ ಹೊಡೆದಿದ್ದಾನೆ. ಬೈಕ್ ವೀಲ್‌ಗೆ ಆ ವೇಳೆ ಕಾಲ್ಬೆರಳು ಸಿಲುಕಿ ಮೇಲೇಳಲು ಸಾಧ್ಯವಾಗಿಲ್ಲ. ಇದೇ ಸಮಯಕ್ಕೆ ಕಾಯುತ್ತಿದ್ದ ಅರುಣ ಆತನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಆ ಸಮಯದಲ್ಲಿ ಅರುಣ್ ಕೈಗೂ ಗಾಯವಾಗಿದೆ. ಘಟನೆ ನಂತರ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅರುಣ್ ಕುಮಾರ್‌ನನ್ನು ಬಂಧಿಸಿದ್ದಾರೆ.