ಬೆಂಗಳೂರು : ರಾಜ್ಯದಲ್ಲಿ ಜಿಮ್ ಮತ್ತು ಈಜುಕೊಳಗಳನ್ನು ಸದ್ಯಕ್ಕೆ ತೆರೆಯುವುದಿಲ್ಲ ಎಂದು ಪ್ರವಾಸೋದ್ಯಮ ಹಾಗೂ ಕ್ರೀಡಾ ಸಚಿವ ಸಿ ಟಿ ರವಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆದು ಕೊಳ್ಳಬೇಕಾಗುತ್ತದೆ. ಈಗಾಗಲೇ ಹೋಟೆಲ್ ಉದ್ಯಮಿದಾರರು ಸಿಎಂ ಬಳಿ ಚರ್ಚೆ ಮಾಡಿದ್ದಾರೆ. ಜಿಮ್ ಹಾಗೂ ಈಜುಕೊಳ ತೆರೆಯುವ ಬಗ್ಗೆ ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶಾಲೆಗಳ ಪ್ರಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಮಿತಿ ವರದಿ ಕೊಟ್ಟಿದೆ. ತಜ್ಞರ ಜೊತೆ ಸಮಾಲೋಚನೆ ನಡೆಸಿ ಪೋಷಕರ ಅಭಿಪ್ರಾಯ ಸಂಗ್ರಹ ಮಾಡಬೇಕು. ನಂತರ ಈ ಬಗ್ಗೆ ಶಿಕ್ಷಣ ಸಚಿವರು ನಿರ್ಧಾರ ಮಾಡಬೇಕು. ಹಲವು ಮುಖಗಳಲ್ಲಿ ಇದನ್ನು ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಕೋವಿಡ್ ವಿಚಾರದಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಸಿಗೆ, ದಿಂಬು ಹಗರಣದಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡ ಕಾಂಗ್ರೆಸ್ನವರು ಬರೀ ಇಂತಹ ಸುಳ್ಳುಗಳನ್ನೇ ಹೇಳಿ ತಿರುಗುತ್ತಿದ್ದಾರೆ ಎಂದರು.
ಕೊರೊನಾ ಬಂದ ಹೊಸತರಲ್ಲಿ ಸರ್ಜಿಕಲ್ ಮಾಸ್ಕ್ಗಳು ಮಾತ್ರ ಇದ್ದವು. ಅಂತಹ ಸಂದರ್ಭದಲ್ಲಿ ಬೇರೆ ಕಡೆಯಿಂದ ಮಾಸ್ಕ್ ಮತ್ತು ಪಿಪಿಇ ಕಿಡ್ ಖರೀದಿ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ಇದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ ಎಂದರು.