ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಮಾಜಿ ಸಿಐಒ ಮಣೂರು ವಾಸುದೇವಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ. ಸದ್ಯ ಮೃತದೇಹ ಆಸ್ಪತ್ರೆಯಲ್ಲಿದ್ದು, ಎಫ್ಎಸ್ಎಲ್ ವರದಿಯ ಬಳಿಕ ಮೃತದೇಹ ಕೋವಿಡ್ ಟೆಸ್ಟ್ಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.
ಈಗಾಗಲೇ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತಹತ್ಯೆಗೆ ಶರಣಾಗುವ ಮುಂಚೆ ಕಾರಿನಲ್ಲಿ 12 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೆಲ ಕಡತಗಳು ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿವೆ. ಇನ್ನು ಡೆತ್ನೋಟ್ ಆಧಾರದ ಮೇರೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತನಿಖೆಗೆ ಇಳಿದ ಪೊಲೀಸರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ್ದ ಗ್ರಾಹಕರ 1,400 ಕೋಟಿ ರೂ.ಗಳನ್ನು ಅಕ್ರಮವಾಗಿ 27 ಮಂದಿಯ ಅಕೌಂಟ್ಗೆ ವರ್ಗಾವಣೆ ಮಾಡಿದ ಆರೋಪ ಇವರ ಮೇಲಿತ್ತು. ಹೀಗಾಗಿ ಎಸಿಬಿ ಜೂನ್ 18ರಂದು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಳಿ ನಡೆಸಿತ್ತು. ಇನ್ನು ಪ್ರಕರಣದ ಗಂಭೀರತೆಯನ್ನು ಅರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಿಐಡಿಗೆ ಹಸ್ತಾಂತರ ಮಾಡಿದರು. ತನಿಖೆಗೆ ಹೆದರಿ ಸಾವನ್ನಪ್ಪಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ. ಇಂದು ಸಿಐಡಿ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಘಟನಾ ಹಿನ್ನೆಲೆ: ಗುರು ರಾಘವೇಂದ್ರ ಸಹಕಾರ ಮಾಜಿ ಸಿಐಒ ನಿನ್ನೆ ಸಂಜೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರ ಹಳ್ಳಿಯ ಪೂರ್ಣಪ್ರಜ್ಞ ಲೇಔಟ್ ಬಳಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಇನ್ನು ಅನುಮಾನಾಸ್ಪದವಾಗಿ ಕಾರು ನಿಂತಿದ್ದನ್ನ ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.