ಬೆಂಗಳೂರು: ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಅಧ್ಯಕ್ಷರನ್ನೇಕೆ ಈವರೆಗೂ ಬಂಧಿಸಿಲ್ಲ ಎಂದು ಪ್ರಶ್ನಿಸಿರುವ ಹೈಕೋರ್ಟ್, ದಕ್ಷವಾಗಿ ತನಿಖೆ ನಡೆಸದಿದ್ದರೆ ತನಿಖಾಧಿಕಾರಿಯನ್ನೇ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿ ಬಸವನಗುಡಿ ನಿವಾಸಿ ಕೆ.ಆರ್. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅಜಿರ್ದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು ವಾದಿಸಿ, ಬ್ಯಾಂಕ್‌ನಿಂದ ಹಣ ಪಡೆದು ಹಿಂದಿರುಗಿಸದ 27 ಗ್ರಾಹಕರ ವಿರುದ್ಧ ಬ್ಯಾಂಕ್ ನಿರ್ದೇಶಕರ ವಿರುದ್ಧ ಕಳೆದ ಫೆ.24ರಂದು ದೂರು ನೀಡಲಾಗಿದೆ. ಆದರೆ, ದೂರಿನ ಸಂಬಂಧ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ.
ಹಗರಣದ ಪ್ರಮುಖ ಆರೋಪಿಯಾಗಿರುವ ಬ್ಯಾಂಕ್ ಅಧ್ಯಕ್ಷ ಕಳೆದ ಎರಡೂವರೆ ತಿಂಗಳಿನಿಂದ ತಲೆ ಮರೆಸಿಕೊಂಡಿದ್ದಾರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಧ್ಯಕ್ಷರನ್ನು ಪೊಲೀಸರು ಈವರೆಗೂ ಪತ್ತೆ ಹಚ್ಚಿ ಬಂಧಿಸಿಲ್ಲ. ಇವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಪ್ರಕರಣದ ಪ್ರಮುಖ ಆರೋಪಿಯನ್ನೇ ಈವರೆಗೆ ಬಂಧಿಸಿಲ್ಲವೆಂದರೆ ಯಾವ ರೀತಿ ತನಿಖೆ ನಡೆಸಲಾಗುತ್ತಿದೆ. ಇದೊಂದು ಗಂಭೀರ ಪ್ರಕರಣ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತನಿಖಾಧಿಕಾರಿಯನ್ನೇ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಅಜಿರ್ದಾರರ ಪರ ಮತ್ತೋರ್ವ ವಕೀಲರು ವಾದಿಸಿ, ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿರುವ ಕೆ. ರಾಮಕೃಷ್ಣ ಅವರಿಗೆ ಸಾಕಷ್ಟು ರಾಜಕೀಯ ಬೆಂಬಲವಿದೆ. ಈ ಹಿಂದೆ ಸಂಸದ ಸ್ಥಾನಕ್ಕೆ ಚುನಾಯಿತರಾಗಲು ಬಯಸಿದ್ದರು. ಹೀಗಿ ಆರೋಪಿ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕಾರಣಿಗಳ ಆಸರೆ ಪಡೆದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎಂದರು.
ವಾದ ಆಲಿಸಿದ ಪೀಠ, ದೊಡ್ಡ ಮಟ್ಟದ ಸಾಲ ಪಡೆದು ವಂಚಿಸಿರುವ 27 ಮಂದಿ ಗ್ರಾಹಕರ ವಿರುದ್ಧ ನೀಡಿರುವ ದೂರಿನ ಸಂಬಂಧ ಕೈಗೊಂಡ ಕ್ರಮವೇನು ಹಾಗೂ ಪ್ರಮುಖ ಆರೋಪಿಯ ಬಂಧನಕ್ಕೆ ಯಾವ ಕ್ರಮ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಹಾಗೆಯೇ, ಕೆಪಿಐಡಿ ಕಾಯ್ದೆ ಅಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬಗ್ಗೆಯೂ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.
ಇದೇ ವೇಳೆ, ಇಡಿ ಅಧಿಕಾರಿಗಳು ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ, ಮುಂದಿನ ಪ್ರಗತಿ ವರದಿಯನ್ನು ಸೆಪ್ಟೆಂಬರ್ 21ರೊಳಗೆ ಸಲ್ಲಿಸುವಂತೆ ಇಡಿ ಪರ ವಕೀಲರಿಗೆ ಸೂಚಿಸಿತು.