ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಬ್ಯಾಂಕ್ ನೀಡಿರುವ ಸಾಲವನ್ನು ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಠೇವಣಿದಾರರ ಹಣವನ್ನು ಹಿಂದಿರುಗಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ಬಿಐಗೆ ಸೂಚಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ, ಬ್ಯಾಂಕ್ ಗೆ ಸೂಕ್ತ ಆಡಳಿತಾಧಿಕಾರಿ ನೇಮಿಸಲು ನಿರ್ದೇಶಿಸಿತ್ತು. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿತು. ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ತಿಳುವಳಿಕೆ ಇರುವ ವ್ಯಕ್ತಿಯನ್ನು ಬ್ಯಾಂಕ್ ಗೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬ್ಯಾಂಕ್ ನ ಆಡಳಿತಾಧಿಕಾರಿ ಬಾಕಿ ಉಳಿದಿರುವ ಸಾಲವನ್ನು ತ್ವರಿತವಾಗಿ ವಸೂಲಿ ಮಾಡಲು ಎಲ್ಲ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು. ಈ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿತು.
ಸೊಸೈಟಿ ನೌಕರರಿಗಿಲ್ಲ ಸಂಬಳ :ವಿಚಾರಣೆ ವೇಳೆ ವಕೀಲರು, ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸಂಬಳ ನೀಡದ ಕಾರಣ, ಕೆಲಸಕ್ಕೆ ಯಾರೂ ಬರುತ್ತಿಲ್ಲ. ಸೊಸೈಟಿ ಮುಚ್ಚಿ ಹೋದಂತಾಗಿದೆ ಎಂಬ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತಂದರು. ಮಾಹಿತಿ ದಾಖಲಿಸಿಕೊಂಡ ಪೀಠ, ಸೊಸೈಟಿ ಕಚೇರಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಹಾಗೂ ನೌಕರರಿಗೆ ವೇತನ ಪಾವತಿ ಸಂಬಂಧ ಮುಂದಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡುವಂತೆ ಸರ್ಕಾರ ಹಾಗೂ ವಿಶೇಷ ಅಧಿಕಾರಿಗೆ ನಿರ್ದೇಶನ ನೀಡಿತು.