ಬೆಂಗಳೂರು: ರಾಜ್ಯದಲ್ಲಿನ ಅಕ್ರಮ ಚರ್ಚ್ಗಳ ಬಗ್ಗೆ ಸರ್ವೆ ನಡೆಸುವಂತೆ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಮೂಲಕ ಬಲವಂತದ ಮತಾಂತರ ಹಾವಳಿ ನಿಯಂತ್ರಿಸಲು ಶಿಫಾರಸು ಮಾಡಿದೆ.
ಸಮಿತಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಕ್ರಮ ಚರ್ಚ್ಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅನಧಿಕೃತ ಚರ್ಚ್ಗಳನ್ನು ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಇರುವ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳು, ಈ ಮಿಷನರಿಗಳು ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳ ನೋಂದಣಿ ಪ್ರಕ್ರಿಯೆ, ಅಕ್ರಮ ಚರ್ಚ್ಗಳಿಂದ ಆಗುತ್ತಿರುವ ಮತಾತಂತರಗಳ ಸಂಬಂಧಿಸಿ ಸಮಾಲೋಚನೆ ನಡೆಸಲಾಯಿತು. ಸಮಿತಿ ಸಭೆಯಲ್ಲಿ ಪುಟ್ಟರಂಗ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ವಿರೂಪಾಕ್ಷಪ್ಪ ಬಳ್ಳಾರಿ, ರಾಜೇಶ್ ನಾಯ್ಕ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ಚರ್ಚ್ಗಳ ಸರ್ವೆ ನಡೆಸಲು ಶಿಫಾರಸು:
ಸಮಿತಿ ಸಭೆಯಲ್ಲಿ ಚರ್ಚ್ಗಳ ಸರ್ವೆ ನಡೆಸಿ, ಅನಧಿಕೃತ ಚರ್ಚ್ಗಳನ್ನು ಪತ್ತೆ ಹಚ್ಚುವಂತೆ ಶಿಫಾರಸು ಮಾಡಲಾಗಿದೆ. ಕೆಲವೆಡೆ ಮನೆಗಳನ್ನು ಚರ್ಚ್ಗಳನ್ನಾಗಿ ಪರಿವರ್ತಿಸಿ, ಅಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿರುವ ಬಗ್ಗೆ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ವೆ ಮೂಲಕ ಹೀಗಾಗಿ ಅನಧಿಕೃತ ಚರ್ಚ್ಗಳನ್ನು ಪತ್ತೆ ಹಚ್ಚಿ, ಅಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಧರ್ಮಗುರುಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಮಿತಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್, ಎಷ್ಟು ಅಧಿಕೃತ, ಅನಧಿಕೃತ ಚರ್ಚ್ಗಳಿವೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇವೆ. ಕೆಲವು ಕಡೆ ಗಲಾಟೆಗಳಾಗಿವೆ. ಇದನ್ನ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಅನಧಿಕೃತ ಚರ್ಚ್ಗಳಲ್ಲಿಯೇ ಗಲಾಟೆಗಳಾಗಿವೆ. ನಾವು ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಶೇಕಡಾ 40 ರಷ್ಟು ಅನಧಿಕೃತ ಚರ್ಚ್ಗಳಿವೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 1790 ಚರ್ಚ್ಗಳಿವೆ. ಈ ಬಗ್ಗೆ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದೇವೆ ಎಂದರು.
ಬಲವಂತದ ಮತಾಂತರ ಆಗುತ್ತಿರುವ ಬಗ್ಗೆ ಬೆಳಕಿಗೆ ಬರುತ್ತಿದೆ. ರಾಜ್ಯದಲ್ಲಿ 36 ಬಲವಂತ ಮತಾಂತರದ ಪ್ರಕರಣಗಳು ದಾಖಲಾಗಿವೆ. ಕೆಲವು ಕಡೆ ಮನೆಗಲ್ಲೇ ಚರ್ಚ್ಗಳನ್ನು ನಡೆಸುತ್ತಿದ್ದು, ಇದು ಅನಧಿಕೃತ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಬಲವಂತದ ಮತಾಂತರ ತಡೆಯುವಂತೆ ಕ್ರಮ ವಹಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದರು.
ಮತಾಂತರಿಗಳಿಂದ ಸವಲತ್ತು ಹಿಂಪಡೆಯಲೂ ಶಿಫಾರಸು:
ಇನ್ನು ಯಾರೂ ಬಲವಂತದಿಂದ ಮತಾಂತರಗೊಂಡ ಬಳಿಕನೂ ಸರ್ಕಾರಿ ಸವಲತ್ತು ಪಡೆಯುತ್ತಿರುವವರ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಸಮುದಾಯದವರನ್ನು ಗುರಿಯಾಗಿಸಿ ಬಲವಂತದ ಮತಾಂತರ ಮಾಡುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಹೀಗೆ ಬಲವಂತವಾಗಿ ಮತಾಂತರವಾಗುತ್ತಾರೋ ಅಂತವರಿಂದ ಸರ್ಕಾರದ ಸವಲತ್ತುಗಳನ್ನ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿ ಮುಂದಾಗಿದೆ.
ಎಸ್ಸಿ, ಎಸ್ಟಿ ,ಹಿಂದುಳಿದ ಸಮುದಾಯದವರು ಮತಾಂತರವಾದ ಬಳಿಕನೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತವರು ಪಡೆಯುತ್ತಿರುವ ಎಸ್ಸಿ, ಎಸ್ಟಿ ಸೌಲಭ್ಯಗಳನ್ನು ಹಿಂಪಡೆಯಬೇಕು. ಯಾವ ಧರ್ಮಕ್ಕೆ ಮತಾಂತರ ಆಗಿರುತ್ತಾರೋ, ಅವರು ಆ ಧರ್ಮದ ಸೌಲಭ್ಯಗಳನ್ನ ಮಾತ್ರ ಪಡೆಯಬೇಕು ಎಂಬ ಬಗ್ಗೆನೂ ಸಮಿತಿ ಶಿಫಾರಸು ಮಾಡಲು ನಿರ್ಧರಿಸಿದೆ.