ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಐತಿಹಾಸಿಕ ದಾಖಲೆ ಸೃಷ್ಟಿಸುವ ಫಲಿತಾಂಶ. ಇದು ಮುಂಬರಲಿರುವ ಕರ್ನಾಟಕ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿ ಸ್ಫೂರ್ತಿ ತುಂಬಲಿದೆ. 140ಕ್ಕೂ ಹೆಚ್ಚಿನ ಸ್ಥಾನದೊಂದಿಗೆ ಕರ್ನಾಟಕದಲ್ಲಿಯೂ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗುಜರಾತ್ನ 182 ವಿಧಾನಸಭಾ ಕ್ಷೇತ್ರದಲ್ಲಿ 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಇದು ಗುಜರಾತ್ ಇತಿಹಾಸದಲ್ಲಿ ದಾಖಲೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಎದ್ದು ಕಾಣುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಾವಣೆ ಮಾಡುತ್ತಾ ಬರಲಾಗುತ್ತಿದೆ. ಆದರೂ ನಮಗೆ ಅಲ್ಲಿ ಈ ಬಾರಿ ಐದಾರು ಸ್ಥಾನ ಕಡಿಮೆಯಾಗುವ ಚಿತ್ರಣ ಕಾಣುತ್ತಿದೆ. ಪೂರ್ಣ ಚಿತ್ರಣ ಇನ್ನಷ್ಟೇ ಬರಬೇಕಿದೆ ಎಂದರು.
ಅಭಿವೃದ್ಧಿ ಮುಖ್ಯ ಎಂದು ತೋರಿಸಿದ ಜನ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವ ದೊಡ್ಡ ಗೆಲುವಿಗೆ ಕಾರಣ ಎಂದು ಬಣ್ಣಿಸಿದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮತದಾರರು ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಮುಖ್ಯ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಇದಕ್ಕಾಗಿ ನಾನು ಆ ರಾಜ್ಯಗಳ ಜನತೆಯನ್ನು ಹಾಗೂ ಮತದಾರರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ವಿರೋಧ ಪಕ್ಷಗಳಿಗೆ ಜನರಿಂದ ತಕ್ಕ ಪಾಠ: ಈ ದೇಶದ ಅಭಿವೃದ್ಧಿ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದು ಇದರಿಂದ ಸಾಬೀತಾಗಿದೆ. ಯಾರೂ ಏನೇ ಮಾತನಾಡಿದರೂ, ರಾವಣ, ಭಸ್ಮಾಸುರ ಎಂಬೆಲ್ಲ ವಿಶ್ಲೇಷಣೆಗಳನ್ನು ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಹಾಳುಗೆಡವಬಹುದು ಎಂಬ ಭ್ರಮೆಯಲ್ಲಿದ್ದ ವಿರೋಧ ಪಕ್ಷಗಳಿಗೆ ದೇಶದ ಜನರು ತಕ್ಕ ಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಸುಭದ್ರವಾಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದ್ದು, ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯದ ಮೇಲೆ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ: ಸಿಎಂ