ಬೆಂಗಳೂರು: ಅಕ್ಟೋಬರ್ 30ರಂದು ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತಿದ್ದು, ಸಾಮೂಹಿಕ ಮೆರವಣಿಗೆ, ಜನ ಸೇರುವುದನ್ನು ನಿಷೇಧಿಸಲಾಗಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಪ್ರವಾದಿ ಮೊಹಮ್ಮದರ ಹುಟ್ಟುಹಬ್ಬವನ್ನು ಈದ್ ಮಿಲಾದ್ ಹಬ್ಬವಾಗಿ ಮುಸ್ಲಿಂ ಬಾಂಧವರು ಅ. 30ರಂದು ರಾಜ್ಯಾದ್ಯಂತ ಆಚರಿಸಲಿದ್ದಾರೆ.
ಹಬ್ಬವನ್ನು ಮೆರವಣಿಗೆ (ಜುಲೂಸ್), ಸಾಮೂಹಿಕವಾಗಿ ಫಾತೇಹಾ, ಝಿಯಾರತ್ ಹಾಗೂ ಅನ್ನದಾನದೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿದೆ. ಸದ್ಯ ಕೋವಿಡ್ ಪ್ರಮಾಣ ಹೆಚ್ಚಾಗಿರುವುದರಿಂದ ಹಬ್ಬವನ್ನು ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಲು ಸೂಚನೆ ನೀಡಲಾಗಿದೆ.
![Guidelines for Eid Milad Festival](https://etvbharatimages.akamaized.net/etvbharat/prod-images/kn-bng-05-edmilad-soprelease-script-7201951_18102020231018_1810f_1603042818_327.jpg)
ಅನುಸರಿಸಬೇಕಾದ ಮಾರ್ಗಸೂಚಿ:
- ರಾಜ್ಯದ್ಯಾಂತ 30.10.2020ರಂದು ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ (ಜುಲೂಸ್), ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿ ಪ್ರವಚನ ಕಾರ್ಯಕ್ರಮ/ಸಾಂಸ್ಕೃತಿಕ ಕಾರ್ಯಕ್ರಮ/ಸಭೆ ಸಮಾರಂಭಗಳಿಗೆ ನಿಷೇಧ
- ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-19 ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು
- ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು/ ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆ ನಿಷೇಧಿಸಲಾಗಿದೆ.
- ಮಾಸ್ಕ್ಗಳನ್ನು ಕಡ್ಡಾಯವಾಗಿ ಎಲ್ಲರೂ ಉಪಯೋಗಿಸತಕ್ಕದ್ದು.
- 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಹಬ್ಬ ಆಚರಣೆ ಮಾಡಬೇಕು.
- ಖಬರಸ್ಥಾನ್ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ.