ಬೆಂಗಳೂರು : ಗೃಹ ಜ್ಯೋತಿ ಯೋಜನೆಗಾಗಿ ಮೊದಲ ದಿನ 55,000 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಭಾನುವಾರ ಸೇವಾ ಸಿಂಧು ಪೋರ್ಟಲ್ನಲ್ಲಿ ಗೃಹ ಜ್ಯೋತಿ ಯೋಜನೆಯ ನೋಂದಣಿ ಆರಂಭಗೊಂಡಿದೆ. 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಮೊದಲ ದಿನವಾದ ಭಾನುವಾರ 55 ಸಾವಿರ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆ ತಿಳಿಸಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಅರ್ಜಿ ಸಲ್ಲಿಕೆ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55,000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿದೆ. ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ಮಾಡಲಾಗಿದೆ.
ಇಂಧನ ಇಲಾಖೆ ಸ್ಪಷ್ಟನೆ: ಇ-ಆಡಳಿತ ಇಲಾಖೆ ನೋಂದಣಿ ಪ್ರಕ್ರಿಯೆನ್ನು ಸರಳೀಕರಣಗೊಳಿಸಿದ್ದು, ಗ್ರಾಹಕರು ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆ, ತಮ್ಮ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಭಾನುವಾರ ರಜಾ ದಿನವಾದರೂ, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಯೋಜನೆಗಾಗಿ ಅರ್ಜಿ ನೋಂದಾಯಿಸಿಕೊಂಡರು. ಗ್ರಾಹಕರು ಯೋಜನೆ ನೋಂದಣಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಮೊಬೈಲ್, ಲ್ಯಾಪ್ ಟಾಪ್ ಅಥವಾ ಸೈಬರ್ ಸೆಂಟರ್ಗಳಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ, ಇಲ್ಲವೆ 24x7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದೆ.
ಆದರೆ ಮೊದಲ ದಿನ ಸರ್ವರ್ ಡೌನ್ ಆಗಿರುವುದರಿಂದ ಅರ್ಜಿ ಸಲ್ಲಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ. ಕೆಲವೆಡೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಬೆಸ್ಕಾಂ ಕಚೇರಿಗಳಿಗೆ ಅರ್ಜಿ ಹಿಡಿದು ಕಾದು ಕೂತರೂ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಬೆಳಗ್ಗೆಯಿಂದ ಕೆಲವೆಡೆ ಅರ್ಜಿ ಹಿಡಿದು ಕಾದು ಕೂತ ಸಾರ್ವಜನಿಕರು ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಕಾದು ಕಾದು ಸುಸ್ತಾಗಿ ಬಳಿಕ ವಾಪಸಾದ ಘಟನೆ ನಡೆಯಿತು.
ತಾಂತ್ರಿಕ ಸಮಸ್ಯೆ: ಇಂದು ಭಾನುವಾರ ರಜಾ ದಿನವಾದರೂ ನಾಡ ಕಚೇರಿ, ಬೆಸ್ಕಾಂ ಕಚೇರಿಗಳು ಅರ್ಜಿ ಸ್ವೀಕಾರಕ್ಕಾಗಿ ತೆರೆದಿದ್ದವು. ಆದರೆ ಬೆಳಗ್ಗೆ ಸೇವಾ ಸಿಂಧು ಸರ್ವರ್ ಫುಲ್ ಬ್ಯುಸಿ ಬರುತ್ತಿದೆ. ಆ ಮೂಲಕ ಗೃಹ ಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಯ ಆರಂಭಿಕ ದಿನವೇ ವಿಘ್ನ ಎದುರಾಗಿತ್ತು. ಪೋರ್ಟಲ್ ಓಪನ್ ಆದ ಕೆಲವೇ ಸಮಯದಲ್ಲಿ ಕ್ಲೋಸ್ ಆಗುತ್ತಿತ್ತು. ಮಧ್ಯಾಹ್ನದವರೆಗೂ ಕಾದು ಕುಳಿತ ಹಲವರು ಬಳಿಕ ವಾಪಸಾಗಿರುವ ಘಟನೆಯೂ ನಡೆಯಿತು. ವೆಬ್ಸೈಟ್ ಓಪನ್ ಆದ ಕೆಲವೇ ಹೊತ್ತಲ್ಲಿ ಮತ್ತೆ ಕ್ಲೋಸ್ ಆಗುತ್ತಿದ್ದು, ತಾಂತ್ರಿಕ ಸಮಸ್ಯೆ ಎದುರಾಗಿತ್ತು.
ಇದನ್ನೂ ಓದಿ : Congress Guarantee: ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ : ಕೈಕೊಟ್ಟ ಸೇವಾ ಸಿಂಧು ಪೋರ್ಟಲ್