ಬೆಂಗಳೂರು : ಹಲವು ವಿರೋಧದ ಬಳಿಕ ಗಾರ್ಮೆಂಟ್ಸ್, ಟೆಕ್ಸ್‌ಟೈಲ್ ಮೇಲಿನ GST ದರ ಇಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಏರಿಕೆ ಮಾಡಿ ವ್ಯಾಪಾರಿಗಳಿಗೆ ಶಾಕ್ ನೀಡಿದೆ. ಉಡುಪುಗಳು, ಜವಳಿಗಳ ಮೇಲೆ ಜಿಎಸ್‌ಟಿ ದರವನ್ನು ಶೇ.5ರಿಂದ 12ಕ್ಕೇರಿಸಿದೆ.
2022 ಜನವರಿ 1ರಿಂದಲೇ ಜಾರಿಗೆ ಬರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದು ಗ್ರಾಹಕರಿಗೂ ಶೇ.7ರಷ್ಟು ಹೊರೆ ಆಗಲಿದೆ. ರೈತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಯೂಟರ್ನ್ ಪಡೆದಂತೆ ಗಾರ್ಮೆಂಟ್ಸ್ ವಿಚಾರದಲ್ಲೂ ಈ ನಿರ್ಧಾರ ಹಿಂಪಡೆಯಬೇಕೆಂದು ಕರ್ನಾಟಕ ಗಾರ್ಮೆಂಟ್ ಅಸೋಸಿಯೇಷನ್ ಬೆಂಗಳೂರಿನ ಮಾಜಿ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಗಾರ್ಮೆಂಟ್ಸ್, ಟೆಕ್ಸ್‌ಟೈಲ್ಸ್‌ಗಳ ಮೇಲೆ GST ಏರಿಕೆ ಆಗುತ್ತಿದೆ. ಪ್ರಧಾನಮಂತ್ರಿ, ಸಿಎಂ, ಕೇಂದ್ರ ಹಣಕಾಸು ಸಚಿವರಿಗೆ ಈಗಾಗಲೇ ಮನವಿ ಪತ್ರ ಕಳಿಸಲಾಗಿದೆ. ಜಿಎಸ್‌ಟಿ ಈಗಿರುವ ಪ್ರಕಾರ 999 ರೂ. ಬೆಲೆಯ ಬಟ್ಟೆಗಳ ಮೇಲೆ 5% ಜಿಎಸ್‌ಟಿ, 1000 ರೂ. ಬಟ್ಟೆ ಮೇಲೆ 12% ಜಿಎಸ್‌ಟಿ ಇದೆ.
ಈಗಾಗಲೇ ಸಾರಿಗೆ ವೆಚ್ಚ, ಹತ್ತಿ ಬೆಲೆ 40%ನಷ್ಟು ಏರಿಕೆ ಆಗಿದೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಸಂಕಷ್ಟ ಉಂಟಾಗಿದೆ. ಜಿಎಸ್‌ಟಿ ಕಡಿಮೆ ಮಾಡದಿದ್ದರೆ ಹೋರಾಟ ಒಂದೇ ನಮಗಿರುವ ದಾರಿ ಎಂದರು.
ಇನ್ನು ಬೆಂಗಳೂರು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್‌ಗಲ್ ಪ್ರಕಟಣೆ ಹೊರಡಿಸಿದ್ದು, ಜಿಎಸ್‌ಟಿ ಏರಿಕೆಯಿಂದ ದೇಶದ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ತೀವ್ರ ಹೊರೆ ಬೀಳಲಿದೆ.
ಈ ರೀತಿ ಜಿಎಸ್‌ಟಿ ಏರಿಕೆಯಿಂದ ಬಟ್ಟೆ ಉದ್ಯಮ, ಮಾರುಕಟ್ಟೆ, ಉದ್ಯೋಗಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀಳಲಿದೆ. ಹೀಗಾಗಿ, ಜಿಎಸ್‌ಟಿ ಏರಿಕೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಮನವಿ ಮಾಡಿದ್ದಾರೆ.