ಬೆಂಗಳೂರು : ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 16ರಿಂದ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸಂಜೆ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಈಗಾಗಲೇ 3 ಯೋಜನೆ ಜಾರಿಗೊಳಿಸಿದ್ದೇವೆ. ನವೆಂಬರ್- ಡಿಸೆಂಬರ್ನಿಂದ ಯುವ ನಿಧಿ ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಲ್ಪ ಸಮಯ ಬೇಕಿದೆ. ಮನೆ ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ ಹಾಕಬೇಕಿರುವುದರಿಂದ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಯಾವಕಾಶ ಬೇಕಾಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆಗಸ್ಟ್ 16ರಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಯುವ ನಿಧಿ : ಇನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಯುವ ನಿಧಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. 2022-23 ರಲ್ಲಿ ಉತೀರ್ಣರಾದ ಪದವೀಧರರು ಹಾಗೂ ಡಿಪ್ಲೊಮಾ ಮುಗಿಸಿದ ನಿರುದ್ಯೋಗ ಯುವಕರಿಗೆ 3 ಸಾವಿರ ರೂ. ಹಾಗೂ 1,500 ರೂ.ಗಳನ್ನು 24 ತಿಂಗಳು ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಎಸ್ಸಿ, ಎಂಕಾಂ ಪಾಸ್ ಮಾಡಿರುವ ಯುವಕರು ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಕೊಟ್ಟೇ ಕೊಡುತ್ತೇವೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಗೃಹ ಜ್ಯೋತಿ ಜುಲೈ 1 ರಿಂದ ಆರಂಭವಾಗಿದೆ. ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಖರೀದಿಗೆ ಎಲ್ಲ ಪ್ರಯತ್ನ ಮಾಡಿದರೂ ಸದ್ಯಕ್ಕೆ ಅಕ್ಕಿ ಸಿಕ್ಕಿಲ್ಲ. ವಿಧಿ ಇಲ್ಲದೇ ಅನಿವಾರ್ಯವಾಗಿ ತಲಾ 170 ರೂಪಾಯಿ ಕೊಡಲು ಇಂದು ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದೇವೆ ಎಂದರು.
ಪ್ರತಿಪಕ್ಷದವರಿಗೆ ಹೊಟ್ಟೆಉರಿ ಎಂದ ಸಿಎಂ: ಇಂದು ಎರಡು ಜಿಲ್ಲೆಗೆ ಹಣ ಪಾವತಿ ಮಾಡಿದ್ದೇವೆ. ಈ ತಿಂಗಳಿನಲ್ಲಿ ಎಲ್ಲ ಫಲಾನುಭವಿಗಳಿಗೂ ಹಣ ವರ್ಗಾವಣೆ ಮಾಡ್ತೀವಿ. ಎಲ್ಲ ಫನಾನುಭವಿಗಳು ಇದರ ಅನುಕೂಲ ಪಡೆಯಬೇಕು. ಪ್ರತಿಪಕ್ಷದವರು ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ, ಜನರು ಖುಷಿಯಾಗಿದ್ದಾರೆ. ಅದಕ್ಕಾಗಿ ಇವರಿಗೆ ಹೊಟ್ಟೆ ಉರಿ, ಹೀಗಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
ನೇರ ನಗದು ವರ್ಗಾವಣೆಗೆ ಅತ್ಯಂತ ಸಂತೋಷದಿಂದ ಚಾಲನೆ ನೀಡಿದ್ದೇನೆ. ಈ ಹಣವನ್ನು ದಿನ ಬಳಕೆ ವಸ್ತು ಖರೀದಿಗೆ ಬಳಸಿಕೊಳ್ಳಿ ಅಥವಾ ಅಕ್ಕಿ ಖರೀದಿಸಿ ಹೊಟ್ಟೆ ತುಂಬ ಊಟ ಮಾಡಿ ಚೆನ್ನಾಗಿರಿ ಎಂದು ಜನತೆಗೆ ಸಿಎಂ ಸಿದ್ದರಾಮಯ್ಯ ತಿಳಿಹೇಳಿದರು.
ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ