ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಬಳಿಕ ಮನೆಯ ಯಜಮಾನಿಗೆ ಆರ್ಥಿಕ ಬಲ ತುಂಬುವ ನಾಲ್ಕನೇ ಯೋಜನೆ ಗೃಹಲಕ್ಷ್ಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸಂಜೆ 5.30ಕ್ಕೆ ಚಾಲನೆ ನೀಡುವರು. ಹೀಗಾಗಿ, ಫಲಾನುಭವಿಗಳ ನೋಂದಣಿಗೆ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಎಪಿಎಲ್, ಬಿಪಿಎಲ್ ಹಾಗು ಅಂತ್ಯೋದಯ ಕಾರ್ಡ್ ಹೊಂದಿರುವವರು ಯೋಜನೆಯ ಲಾಭ ಪಡೆದುಕೊಳ್ಳಬಹುದು. ಪಡಿತರ ಚೀಟಿಯಲ್ಲಿ 'ಯಜಮಾನಿ ಮಹಿಳೆ' ಎಂದು ಗುರುತಿಸಿರುವ ಮಹಿಳೆ ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ, ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿರಬಾರದು. ಜೊತೆಗೆ, ರೇಷನ್ ಕಾರ್ಡ್ನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಯಜಮಾನಿಯರಿದ್ದರೆ ಅನ್ವಯವಾಗುವುದಿಲ್ಲ.
ನೋಂದಣಿ ಪ್ರಕ್ರಿಯೆ ಹೇಗೆ? ಎಲ್ಲಿ? : ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಹಾಗೆಯೇ, ನಗರ ಪ್ರದೇಶದಲ್ಲಿ ಇರುವವರು ಸಮೀಪವಿರುವ ಕರ್ನಾಟಕ-ಒನ್ ಅಥವಾ ಬೆಂಗಳೂರು-ಒನ್ ಕೇಂದ್ರದಲ್ಲಿ ನೋಂದಣಿ ಮಾಡಿಸಬಹುದು. ಪರ್ಯಾಯವಾಗಿ 'ಪ್ರಜಾಪ್ರತಿನಿಧಿ' (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ವೀಕಾರ ದಿನಾಂಕ ನಿಗದಿಗೆ ಸಂಪುಟ ಸಭೆ ತೀರ್ಮಾನ!
ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ನಂಬರ್‌ಗೆ ಕಾಲ್ ಮಾಡಿ ಅಥವಾ 8147500500 ನಂಬರ್‌ಗೆ SMS / ವಾಟ್ಸ್ ಆ್ಯಪ್ ಕಳುಹಿಸಿ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ-ಒನ್ / ಬಾಪೂಜಿ ಕೇಂದ್ರ/ ಕರ್ನಾಟಕ-ಒನ್ / ಬೆಂಗಳೂರು-ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಉಚಿತ.
ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳೇನು? : ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ (ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿರುತ್ತದೆ. ಜೊತೆಗೆ, ಗೃಹ ಲಕ್ಷ್ಮಿ ಅರ್ಜಿಯಲ್ಲಿ ಮನೆಯ ಯಜಮಾನಿ ಪತಿಯ ದಾಖಲೆಗಳನ್ನು ಸಹ ಬಳಸಲಾಗುತ್ತಿದೆ. ಪತಿಯ ಆಧಾರ್ ಕಾರ್ಡ್, ವೋಟರ್ ಐಡಿ ದಾಖಲೆ ಕೂಡ ಅರ್ಜಿ ಸಲ್ಲಿಕೆ ವೇಳೆ ಅಗತ್ಯ.
ಇದನ್ನೂ ಓದಿ : Gruha Lakshmi scheme: ಜುಲೈ 19 ರಿಂದ 'ಗೃಹಲಕ್ಷ್ಮಿ' ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ.. ಸಮಗ್ರ ಮಾಹಿತಿ