ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಪ್ರಯತ್ನಿಸಲಿ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುವುದರ ಜೊತೆಗೆ ಅರಣ್ಯ ಪ್ರದೇಶದ ಹೆಚ್ಚಳವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅರಣ್ಯ ಭವನದಲ್ಲಿ ಎಲ್ಲಾ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ /ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿಎಂ, ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳ ಮತ್ತು ರೈತರ ಸಹಕಾರ ಬಹಳ ಮುಖ್ಯ, ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣ್ಯ ಅಧಿಕಾರಿಗಳ ಕರ್ತವ್ಯ ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ಹಸಿರು ವಲಯ ಹೆಚ್ಚಿಸಿ:
ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ಶೇಕಡ 22.8 ರಷ್ಟಿದ್ದು, ಅದನ್ನು ಶೇಕಡಾ 33 ರಷ್ಟು ಹೆಚ್ಚಿಸಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.
ಬೇಸಿಗೆ ಸಮೀಪಿಸುತ್ತಿರುವುದರಿಂದ ಕಾಡ್ಗಿಚ್ಚು ಹರಡದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ. ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.