ಬೆಂಗಳೂರು: ಮಾರ್ಚ್ ಅಂತ್ಯದ ವೇಳೆಗೆ 44.65 ಕಿ. ಮೀ. ವ್ಯಾಪ್ತಿಯ ನಮ್ಮ ಮೆಟ್ರೋ ಮೂರನೇ ಹಂತದ ಪೂರ್ತಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಕಂಡು ಬರುತ್ತಿದೆ. ಈ ಯೋಜನೆಗಾಗಿ ಸುಮಾರು ಒಂದು ವರ್ಷದಿಂದ ಕೇಂದ್ರದ ಒಪ್ಪಿಗೆಗೆ ಕಾಯಲಾಗುತ್ತಿದೆ. ಪಿಎಂ ಗತಿ ಶಕ್ತಿ ಯೋಜನೆಯ ಭಾಗವಾಗಿರುವ ನೆಟ್ ವರ್ಕ್ ಪ್ಲಾನಿಂಗ್ ಗ್ರೂಪ್ ಸಭೆಯು ಜನವರಿ ಮೂರನೇ ವಾರದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಯೋಜನೆಯ ಎಲ್ಲ ಮೂಲ ಸೌಕರ್ಯಗಳ ವಿವರಗಳನ್ನು ಚರ್ಚಿಸಲಾಗುತ್ತದೆ. ಈ ಸಭೆಯ ಬಳಿಕ ಮುಂದಿನ ಸಾರ್ವಜನಿಕ ಹೂಡಿಕೆ ಮಂಡಳಿಯೊಂದಿಗೆ ಸಭೆ ನಡೆಯಲಿದೆ. ತದ ನಂತರ ಪೂರ್ಣ ಪ್ರಮಾಣದ ಅನುಮೋದನೆ ಅನುದಾನ ಸಿಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 2023ರ ಫೆಬ್ರವರಿಯಲ್ಲಿ 15,611 ಕೋಟಿ ರೂಪಾಯಿ ವಿವರವಾದ ಯೋಜನಾ ವರದಿಯನ್ನು ಕೇಂದ್ರಕ್ಕೆೆ ಸಲ್ಲಿಸಲಾಗಿದ್ದು, ಸ್ಪಷ್ಟೀಕರಣಗಳನ್ನು ಕೋರಿ ಕಡತಗಳನ್ನು ಹಲವು ಬಾರಿ ಕಳುಹಿಸಲಾಗಿದೆ. 2022 ರ ನವೆಂಬರ್ 18 ರಂದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಮೂರು ತಿಂಗಳ ಹಿಂದೆ ಮಾಗಡಿ ರಸ್ತೆ ಕಾರಿಡಾರ್‌ನಲ್ಲಿ ಪ್ರಸ್ತಾಪಿಸಲಾದ ಆರು ಬೋಗಿಗಳ ರೈಲುಗಳನ್ನು ಮೂರು ಬೋಗಿಗಳಿಗೆ ಬದಲಾಯಿಸುವ ಮೂಲ ನಿರ್ಣಾಯಕ ಬದಲಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜನವರಿ ಅಂತ್ಯದ ವೇಳೆಗೆ ಎನ್‌ಪಿಜಿ ಸಭೆ ಮತ್ತು ಫೆಬ್ರವರಿ ತಿಂಗಳ ಮಧ್ಯದ ವೇಳೆಗೆ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆ ನಡೆದರೆ, ಮಾರ್ಚ್ ಮೊದಲ ವಾರದೊಳಗೆ ಯೋಜನೆಗೆ ಹಸಿರು ನಿಶಾನೆ ಸಿಗಲಿದೆ. ಆ ಬಳಿಕ ಕ್ಯಾಬಿನೆಟ್ ಒಪ್ಪಿಗೆ ನೀಡಬೇಕಾಗಿದೆ. ಪಿಐಬಿ ಅಂತಿಮ ಪ್ರಾಧಿಕಾರವಾಗಿದ್ದು, ಅನುಮೋದಿಸಿದರೆ ಟೆಂಡರ್ಗಳನ್ನು ಮುಂದುವರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಎರಡು ಎಲಿವೇಟೆಡ್ ಕಾರಿಡಾರ್: ಮೂರನೇಯ ಹಂತದ ನಮ್ಮ ಮೆಟ್ರೋ ಯೋಜನೆ ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಹೊಂದಿದ್ದು, ಒಂದು ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರ ವರೆಗೆ ಹೊರ ವರ್ತುಲ ರಸ್ತೆೆ (12.5 ಕಿ.ಮೀ.), ಮತ್ತು ಮಾಗಡಿ ರಸ್ತೆೆ (32.15 ಕಿ.ಮೀ.) ಮೂಲಕ ಹೊಸಹಳ್ಳಿಯಿಂದ ಕಡಬಗೆರೆವರೆಗೆ ನಿರ್ಮಿಸಲಾಗುತ್ತಿದೆ. ಒಟ್ಟು 31 ನಿಲ್ದಾಣಗಳನ್ನು ಹೊಂದಿದೆ. 2028 ರ ಗಡುವನ್ನು ನಿಗದಿಪಡಿಸಲಾಗಿದ್ದು, 2051 ರ ವೇಳೆಗೆ 9.12 ಲಕ್ಷ ಪ್ರಯಾಣಿಕರನ್ನು ಸಾಗಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಪೂಜಿಸಲೆಂದೇ ಹೂಗಳ ತಂದೆ..' ಗೀತೆಗೆ ಪ್ರಧಾನಿ ಮೋದಿ ಮೆಚ್ಚುಗೆ; ಕೃತಜ್ಞತೆ ಸಲ್ಲಿಸಿದ ಗಾಯಕಿ