ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ಅನುಷ್ಠಾನಗೊಳಿಸುತ್ತಿರುವ ದೇಶದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ನೇ ಸಾಲಿನಿಂದ ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನವದೆಹಲಿಯಿಂದ ವರ್ಚುವಲ್ ಮೂಲಕ ಇಂದು ಚಾಲನೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್ಇಪಿ (NEP) ಸಹಾಯವಾಣಿ ಉದ್ಘಾಟನೆ ಮಾಡಿದರು. ಜೊತೆಗೆ NEP ಪ್ರವೇಶಾತಿಗೆ ರೂಪಿಸಲಾಗಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ಅಡ್ಮಿಷನ್ ಮಾಡ್ಯೂಲ್(admission module) ವ್ಯವಸ್ಥೆಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಿಎಂ, ಹೊಸ ಡಿಜಿಟಲ್ ನೀತಿಯನ್ನು ಅನುಷ್ಠಾನ ತರುವುದಾಗಿ ಘೋಷಣೆ ಮಾಡಿದರು. ತಜ್ಞರು, ನುರಿತರು ಸಲಹೆಗಳನ್ನು ನೀಡಿದರೆ ಆದಷ್ಟು ಶೀಘ್ರವಾಗಿ ತರಲು ಅನುಕೂಲವಾಗುತ್ತದೆ. ಹಾಗೆಯೇ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪ್ಯಾಡ್ ನೀಡಲು ಉದ್ದೇಶಿಸಲಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿಮೋಚನೆ ಸಿಕ್ಕಿದಂತಾಗುತ್ತದೆ. ಈ ನೀತಿಯು ಯಶಸ್ವಿಯಾದರೆ, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸುವ ರೀತಿಯಲ್ಲೇ ಆಗಸ್ಟ್ 23ರಂದು ಶಿಕ್ಷಣ ದಿನಾಚರಣೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉಪಸ್ಥಿತರಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ ಶಿಕ್ಷಣ ತಜ್ಞ ಡಾ.ಕೆ. ಕಸ್ತೂರಿ ರಂಗನ್, ಡಾ. ಎಂ.ಕೆ. ಶ್ರೀಧರ್, ಡಾ.ಟಿ.ವಿ. ಕಟ್ಟಿಮನಿ, ಡಾ. ಅನುರಾಗ ಬೇಹಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇದನ್ನೂ ಓದಿ: ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ: ಮಠದಲ್ಲಿ ಪೂರ್ವಾರಾಧನೆ ಸಂಭ್ರಮ