ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಆಯವ್ಯಯ ಮಂಡಿಸಲು ಸರ್ಕಾರ ಅನುಮತಿಸಿದೆ. ಆದ್ರೆ ಕೋವಿಡ್-19 ಸೋಂಕಿನ ಹಿನ್ನೆಲೆ ಹೆಚ್ಚು ಜನ ಸೇರದಂತೆ ಕ್ರಮ ವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಲು ಅವಕಾಶ ನೀಡಿದೆ.

ಮೇಯರ್-ಉ ಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರು ಮತ್ತು ಕೌನ್ಸಿಲ್ ಕಾರ್ಯದರ್ಶಿಗಳು ಮಾತ್ರ ಕೇಂದ್ರ ಕಚೇರಿಯಲ್ಲಿದ್ದು ಬಜೆಟ್ ಮಂಡಿಸಬೇಕು. ಉಳಿದಂತೆ ಎಂಟು ವಲಯವಾರು ಸದಸ್ಯರು ವಲಯಮಟ್ಟದಲ್ಲಿ ಸಭೆ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡು, ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಕಚೇರಿಯೊಂದಿಗೆ ಸಂಹನ ನಡೆಸಿ ಅನುಮೋದನೆಗೊಂಡ ಆಯವ್ಯಯವನ್ನು ಸರ್ಕಾರಕ್ಕೆ ಕಳುಹಿಸುವಂತೆ ಸೂಚಿಸಿದೆ.
ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೆವು. ಇನ್ನೂ ಹೆಚ್ಚು ವಿಳಂಬ ಮಾಡಿದ್ರೆ ಬಿಬಿಎಂಪಿ ಕಾರ್ಯಚಟುವಟಿಕೆಗಳಿಗೆ ಅಡಚಣೆ ಆಗಲಿದೆ. ಹಾಗಾಗಿ ಇದೇ ವಾರದಲ್ಲಿ ಬಜೆಟ್ ಮಂಡನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.