ಬೆಂಗಳೂರು: ನಾಳೆಯಿಂದ ಆಫ್ಲೈನ್ನಲ್ಲಿ ಪದವಿ ತರಗತಿಗಳು ಆರಂಭಗೊಳ್ಳುತ್ತಿದ್ದು, ತರಗತಿಗಳನ್ನು ನಡೆಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಭೇಟಿ ನೀಡಿದರು. ದೀಪಾವಳಿ ಹಬ್ಬದ ಶುಭ ಕೋರಿ ನಾಳೆಯಿಂದ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ತರಗತಿಗಳ ಆರಂಭಕ್ಕೆ ಕೊರೊನಾ ಮಾರ್ಗಸೂಚಿಯನ್ವಯ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡಿದರು. ಕಾಲೇಜುಗಳ ಪ್ರವೇಶ ದ್ವಾರ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಆವರಣದ ಒಳಗೆ ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಯ ಥರ್ಮಲ್ ತಪಾಸಣೆ, ಮಾಸ್ಕ್ ಕಡ್ಡಾಯಗೊಳಿಸಿದ್ದು, ಕೈಗಳನ್ನು ಶುದ್ಧಗೊಳಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರವೇಶ ನಿರಾಕರಣೆ ಮಾಡಲಿದ್ದು, ಶೇ. 50ರಷ್ಟು ವಿದ್ಯಾರ್ಥಿಗಳಿಗೆ ರೊಟೇಶನ್ ಆಧಾರದಲ್ಲಿ ತರಗತಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಕಾಲೇಜಿನಲ್ಲಿ ಕೋವಿಡ್ ಕಾರ್ಯಪಡೆ ರಚಿಸಿದ್ದು, ಕೊರೊನಾ ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಾಸ್ಟೆಲ್ಗಳಲ್ಲಿಯೂ ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಯಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ನಾಳೆಯಿಂದ ಪದವಿ ಕಾಲೇಜುಗಳನ್ನು ಆರಂಭ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಗ್ರ ಮಾಹಿತಿಯನ್ನು ಡಿಸಿಎಂ ಡಾ. ಅಶ್ವತ್ಥ ನಾರಾಯಣ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ಕಾಲೇಜು ಆರಂಭಕ್ಕೆ ಮಾಡಿಕೊಂಡಿರುವ ತಯಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವ ಲೋಪವೂ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೊರೊನಾ ವಿಚಾರದಲ್ಲಿ ಯಾವ ಕಾರಣಕ್ಕೂ ಎಚ್ಚರ ತಪ್ಪದಿರಿ ಎನ್ನುವ ಸಲಹೆ ನೀಡಿದ್ದಾರೆ.