ಬೆಂಗಳೂರು: ಜ್ಞಾನ ಕೆಲವರಿಗೆ ಮಾತ್ರ ಸೀಮಿತವಾದದ್ದಲ್ಲ. ಇದನ್ನು ಕೆಲವೇ ಕೆಲವರು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಉಬಂಟು ಹಾಗೂ ಯುನಿಸ್ಕೇಪ್ ಜಂಟಿಯಾಗಿ ಹಮ್ಮಿಕೊಂಡಿದ್ದ ಡಿಜಿಟಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನ ಎಂಬುದು ಒಬ್ಬ ವ್ಯಕ್ತಿಯ ಯೋಚನಾ ಶಕ್ತಿ ಅರಿವು ಹಾಗೂ ತಿಳುವಳಿಕೆಯನ್ನು ಬದಲಿಸುತ್ತದೆ. ಜ್ಞಾನ ಸಂಪಾದನೆಗೆ ಸೀಮಿತತೆ ಇಲ್ಲ. ಯೋಚಿಸುವ ಕಾರ್ಯಕ್ಕೂ ಸೀಮಿತತೆ ಇಲ್ಲ. ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಿದ್ದು, ತಮ್ಮನ್ನು ತಾವು ಕಡಿಮೆ ಎಂದು ಪರಿಗಣಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ನಾನೊಬ್ಬ ಚಿಕ್ಕ ವಾಣಿಜ್ಯೋದ್ಯಮಿ, ಬೆಳೆಯಲು ಸಾಧ್ಯವಿಲ್ಲ ಎಂಬ ಕೀಳರಿಮೆ ಯಾರಿಗೂ ಬೇಡ. ಡಿಜಿಟಲ್ ಮಾರುಕಟ್ಟೆ ಎಲ್ಲರಿಗೂ ಸಹಕಾರ ನೀಡುತ್ತದೆ. ಸರ್ಕಾರ ಸಹ ನಿಮ್ಮೊಂದಿಗೆ ಇದೆ. ಇದರಿಂದ ನಿಮ್ಮ ಕಾರ್ಯಕ್ಷೇತ್ರವನ್ನು ಎಷ್ಟು ಬೇಕಾದರೂ ವಿಸ್ತರಿಸಿಕೊಳ್ಳಬಹುದು. ಡಿಜಿಟಲ್ ಮಾರ್ಕೆಟ್ನಲ್ಲಿ ಬಹುತೇಕ ಇದರ ವ್ಯಾಪ್ತಿ ಪರಸ್ಪರ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳಲು ಅವಕಾಶ ಇಲ್ಲವಾದದ್ದು. ಇದರಿಂದ ಇಲ್ಲಿ ನಂಬಿಕೆಯೇ ಅತಿದೊಡ್ಡ ಹೂಡಿಕೆ ಆಗಿದೆ.
ವಾಣಿಜ್ಯೋದ್ಯಮಿಗಳು ಜನರ ನಂಬಿಕೆ ಗಳಿಸಿದರೆ ನಿಮ್ಮ ಪ್ರಗತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಉತ್ಪನ್ನ ವಿತರಣೆ ಹಾಗೂ ಉತ್ಪಾದನೆಯಲ್ಲಿ ಜನರ ನಂಬಿಕೆ ಕಳುಹಿಸುವ ಕಾರ್ಯ ಮಾಡಿ. ವ್ಯಾಪ್ತಿ ಹಾಗೂ ವಿಸ್ತಾರ ವಿಶಾಲವಾಗಿದ್ದು, ಎಲ್ಲ ಮೂಲೆಯನ್ನು ತಲುಪುವ ಪ್ರಯತ್ನ ಮಾಡಿ. ರಾಜ್ಯ ಸರ್ಕಾರ ಸಾಕಷ್ಟು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮಹಿಳಾ ವಾಣಿಜ್ಯೋದ್ಯಮಗಳು ಇದರ ಅನುಕೂಲವನ್ನು ಪಡೆದುಕೊಳ್ಳಲು ಮುಂದಾಗಬೇಕು. ಮಹಿಳಾ ಸ್ವಾವಲಂಬನೆ ಹಾಗೂ ವಾಣಿಜ್ಯೋದ್ಯಮ ಪ್ರಗತಿಗೆ ಸರ್ಕಾರ ಯಾವುದೇ ಸಹಕಾರವನ್ನು ಘೋಷಿಸಬಹುದು. ಸೌಲಭ್ಯ ಸ್ವೀಕರಿಸಲು ನೀವು ಸಜ್ಜಾಗಿ ಎಂದು ಕರೆಕೊಟ್ಟರು.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಹಾನಿ, ಮಂಕಿಪಾಕ್ಸ್ ಮುನ್ನೆಚ್ಚರಿಕೆ: ಮಹತ್ವದ ಸಭೆ ನಡೆಸಲಿರುವ ಸಿಎಂ