ಬೆಂಗಳೂರು : ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ನಿವೇಶನ ಹಾಗೂ ಸ್ವ ಉದ್ಯೋಗಕ್ಕಾಗಿ 5 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ವಿಧಾನಸೌಧದಲ್ಲಿ ಪಿಂಚಣಿಗಾಗಿನ 'ಹಲೋ ಕಂದಾಯ ಸಚಿವರೇ' ಸಹಾಯವಾಣಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರು ನಿವೇಶನ ಇಲ್ಲ ಅಂತಿದ್ದಾರೆ. ಆ್ಯಸಿಡ್ ದಾಳಿಗೊಳಗಾದ ಎಲ್ಲರಿಗೆ ಸರ್ಕಾರದಿಂದ ನಿವೇಶನ ನೀಡಲಾಗುವುದು. ಆ ಸಂಬಂಧ ನಾಳೆ ಆದೇಶ ಹೊರಡಿಸಲಾಗುತ್ತದೆ. ವಸತಿ ಯೋಜನೆಯಡಿ ಅವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಇದರ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಿ, ಸ್ವಯಂ ಉದ್ಯೋಗ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ನಮ್ಮದು ಜನಪರ ಆಡಳಿತ : ಜನರಿಗೋಸ್ಕರ ಈ ಸರ್ಕಾರ ಇದೆ, ಜನಪರ ಆಡಳಿತ ಕೊಡುತ್ತೇವೆ. ರಾಜಕೀಯದಲ್ಲಿ ಎರಡು ರಾಜಕೀಯ ಇರುತ್ತದೆ. ಜನರ ಪರವಾದ ರಾಜಕೀಯ, ಇನ್ನೊಂದು ಅಧಿಕಾರದ ರಾಜಕಾರಣ. ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಿದ ಆಡಳಿತಗಾರರನ್ನು ಜನ ಸದಾ ನೆನಪಿಟ್ಟಿರುತ್ತಾರೆ. ಹಳ್ಳಿಗಳಲ್ಲಿ ಜನರು ಸಮಸ್ಯೆ ಜೊತೆ ಜೀವನ ಮಾಡುತ್ತಾರೆ. ನಾವು ಬಿಸಲೇರಿ ನೀರು ಕುಡಿದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ. ನಾವು ಎಸಿ ರೂಮಿನಲ್ಲಿ ಕೂತು ಬರದ ಬಗ್ಗೆ ಮಾತನಾಡುತ್ತೇವೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ ಎಂದು ಬೊಮ್ಮಾಯಿ ತಿಳಿಸಿದರು.
ಅಧಿಕಾರ ಗ್ರಾಮಗಳಿಗೆ ತಲುಪಬೇಕು : ಆಳುವುದು ಎಂದರೆ ಹೃದಯದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವುದಾಗಿದೆ. ಇಂದು ಆಡಳಿತ ಮಾಡುವವರು ಆಳುವುದಕ್ಕೆ ಹೋಗುತ್ತಾರೆ. ಇದು ಜನಸ್ಪಂದನೆ ಇರುವ ಸರ್ಕಾರ ಆಗಿದೆ. ಮನೆ ಬಾಗಿಲಿಗೆ ಸೇವೆ ಬರುವುದು ಅಧಿಕಾರದ ವಿಕೇಂದ್ರೀಕರಣವಾಗಿದೆ. ಅಧಿಕಾರ ನೇರವಾಗಿ ನಮ್ಮ ಗ್ರಾಮಗಳಿಗೆ ತಲುಪಬೇಕು. ಜೇನುತುಪ್ಪದಂತೆ ಹರಿದು ಹೋಗಬೇಕು. ಗ್ರೀಸ್ ತರ ಕೂರಬಾರದು. ಆ ಕೆಲಸವನ್ನು ಸಚಿವ ಆರ್.ಅಶೋಕ್ ಮಾಡಿದ್ದಾರೆ ಎಂದರು.
ಏನಿದು ಹಲೋ ಕಂದಾಯ ಸಚಿವರೇ ಸಹಾಯವಾಣಿ? : ಕಂದಾಯ ಇಲಾಖೆ ಇದೀಗ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಹಾಯವಾಣಿ ಸಂಖ್ಯೆ 155245* (Toll free) ಕರೆ ಮಾಡಿದರೆ 72 ತಾಸಿನಲ್ಲಿ ಪಿಂಚಣಿ ಮನೆ ಬಾಗಿಲಿಗೆ ಬರುತ್ತದೆ.
ನಾಗರಿಕರು ದೂರವಾಣಿ ಕರೆ ಮೂಲಕ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ. ದೂರವಾಣಿ ಮುಖಾಂತರ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮ ಲೆಕ್ಕಾಧಿಕಾರಿಗಳು ಸದರಿ ಮಾಹಿತಿ ಆಧರಿಸಿ ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ 'ನವೋದಯ' ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸಿಕೊಳ್ಳುತ್ತಾರೆ.
ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್,ಬ್ಯಾಂಕ್/ಅಂಚೆ ಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಬೇಕು. (ಪಡಿತರಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ).
ಅರ್ಹರಿಗೆ 72 ಗಂಟೆಯೊಳಗೆ ನಾಡಕಚೇರಿ ಉಪ ತಹಶೀಲ್ದಾರ್ರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಿ, ಮಂಜೂರಾತಿ ಆದೇಶದ ಡೌನ್ ಲೋಡ್ ಲಿಂಕ್ ಅನ್ನು SMS ಮೂಲಕ ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು/ಗ್ರಾಮ ಸಹಾಯಕರ ಮೂಲಕ ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶಪತ್ರ ವಿತರಣೆ ಮಾಡಲಾಗುವುದು ಮತ್ತು ಇದನ್ನು ಖಚಿತ ಪಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ: ನಲಪಾಡ್