ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನರೇಗಾ ಮುಖಾಂತರ ಅಂತರ್ಜಲ ಚೇತನ ಯೋಜನೆ ಆರಂಭಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 273 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಟ್ ಆಫ್ ಲೀವಿಂಗ್ ಅವರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದು, ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಪೈಲಟ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಯೋಜನೆಯು ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರಾಜ್ಯದ ಸಮಗ್ರ ಅಂತರ್ಜಲ ಚೇತನಕ್ಕೆ ಇದು ಸಹಕಾರಿಯಾಗಲಿದೆ. ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕ್ರಿಯಾ ಯೋಜನೆ ಹಾಕಿ 8-10 ದಿನದಲ್ಲಿ ಪ್ರಾರಂಭ ಮಾಡುತ್ತೇವೆ. ಜೂನ್ ವೇಳೆ 9 ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭ ಆಗುತ್ತದೆ ಎಂದರು.
ಕ್ಯಾಬಿನೆಟ್ನಲ್ಲಿ ತೀರ್ಮಾನ : ಗ್ರಾಮ ಪಂಚಾಯತ್ ಚುನಾವಣೆ ಮುಂದೂಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಈಗ ಆಡಾಳಿತಾಧಿಕಾರಿ ನೇಮಕವೊ ಅಥವಾ ಆಡಳಿತ ಸಮಿತಿ ರಚಿಸಬೇಕೊ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಇಂದು ರಾಜ್ಯದ ಗ್ರಾಮ ಪಂಚಾಯತ್ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಕೊರೊನಾ ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ ಚುನಾವಣೆ ಮುಂದಕ್ಕೆ ಹಾಕಲು ಈಗಾಗಲೇ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಆ ಮಧ್ಯಂತರ ಅವಧಿಗೆ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಿಸುವ ಕುರಿತು ಮುಖ್ಯಮಂತ್ರಿಗಳ ನಿರ್ದೇಶನದಂತೆ ಇಂದು ನನ್ನ ನೇತೃತ್ವದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ಕೋಟಾ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ ಸಭೆ ನಡೆಸಿ ಚರ್ಚಿಸಲಾಯಿತು. ಚರ್ಚೆಯ ಸಮಗ್ರ ವಿವರಗಳನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತಿರುಗೇಟು : ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ಮದ್ಯ ಮಾರಾಟ ಮಾಡಿ ಎಂದು ಇವರೇ ಸಲಹೆ ನೀಡಿದ್ರು. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಎಂದ್ರೆ ಏನು?. ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ?. ನನಗೆ ಅರ್ಥ ಆಗ್ತಿಲ್ಲ ಸಿದ್ದರಾಮಯ್ಯರ ಹೇಳಿಕೆ. ಕುಡುಕರಿಗೆ ಶಿಸ್ತು ಪಾಲನೆ ಮಾಡಿ ಅಂದ್ರೆ ಮಾಡ್ತಾರೆಯೇ ಕುಡುಕರು ಹೇಗೆ ಇರಬೇಕು ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ರೆ ಉತ್ತಮ. ಸಿದ್ದರಾಮಯ್ಯರು ಹೇಳಲಿ, ಸಲಹೆ ನೀಡಲಿ ಅವರು ಹೇಳಿದಂತೆ ನಾವು ಮಾಡುತ್ತೇವೆ ಎಂದು ಹೇಳಿದರು.
ಡಿಕೆಶಿಗೆ ಟಾಂಗ್ : ಕಾರ್ಮಿಕರನ್ನು ಅವರವರ ಊರಿಗೆ ಕಳಿಸುವಲ್ಲಿ ಸರ್ಕಾರ ಎಡವಿದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಗರಂ ಆದ ಈಶ್ವರಪ್ಪ, ಡಿ.ಕೆ. ಶಿವಕುಮಾರ್ಗೆ ಕಣ್ಣು ಕಾಣಲ್ವಾ, ಅವರು ಕಣ್ಣಿದ್ದು ಕುರುಡರಾಗಿದ್ದಾರೆ. ದೇಶದಲ್ಲಿ ಕೊರೊನಾ ಕಂಟ್ರೋಲ್ ಉತ್ತಮವಾಗಿ ಮಾಡುತ್ತಿರುವುದೇ ಕರ್ನಾಟಕ. ಅದಕ್ಕೆ ಜನರು ನಮ್ಮನ್ನು ಪ್ರಶಂಸಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಪೈಪೋಟಿಗೆ ಬಿದ್ದು ಮಾತನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.