ಬೆಂಗಳೂರು: ಬೆಳೆ ವಿಮೆಗೆ ಅರ್ಹರಾದ ಫಲಾನುಭವಿಗಳಿಗೆ ವಿಮೆ ವಿತರಿಸಿರುವ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾರದರ್ಶಕತೆಗೆ ಒತ್ತುಕೊಟ್ಟು ರೈತರ ವಿಚಾರದಲ್ಲಿ ಸರ್ಕಾರ ಬದ್ಧತೆಯನ್ನು ತೋರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಈ ಕೆಲಸ ಮಾಡಬೇಕು. ಸರ್ವ ಪಕ್ಷಗಳ ವಿಶೇಷ ಹಾಗೂ ಉನ್ನತ ಮಟ್ಟದ ಪ್ರತ್ಯೇಕ ಸಮಿತಿ ರಚಿಸಿ ಬೆಳೆ ಹಾನಿಯ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಿ, ರೈತರಿಗೆ ನ್ಯಾಯ ಒದಗಿಸಬೇಕು. ಸರ್ಕಾರ ವಿಳಂಬ ಮಾಡಿದರೆ ವಿಮಾ ಕಂಪನಿಗಳು ಇದನ್ನೇ ಲಾಭವಾಗಿ ಪಡೆದುಕೊಂಡು ವಿಮೆ ನೀಡದೆ, ತಮಗಾಗುವ ನಷ್ಟ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ರೈತರ ಬೆಳೆನಷ್ಟ ಅಂದಾಜು ಹಾಕಿದರೆ ಕನಿಷ್ಠ 4 ಸಾವಿರ ಕೋಟಿ ಮೊತ್ತದ ವಿಮಾ ಮೊತ್ತ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮನೆ ಕಳೆದುಕೊಂಡವರಿಗೆ 5 ಸಾವಿರ ರೂ. ಬಾಡಿಗೆ ಕೊಡುತ್ತೇವೆ, ಮನೆ ಕಟ್ಟಲು 5 ಲಕ್ಷ ರೂ. ಭರವಸೆ ನೀಡಲಾಗಿದೆ. 10 ತಿಂಗಳ ಕಾಲಮಿತಿಯಲ್ಲಿ ಮನೆ ಆಗಬೇಕು. 350 ಚದರ್ ಅಡಿ ಜಾಗದಲ್ಲಿ ಮನೆ ಕಟ್ಟಿದರೆ ಚಿಕ್ಕದಾಗುತ್ತದೆ. ಇದರಿಂದ 800 ಚದರ್ ಅಡಿ ಜಾಗದಲ್ಲಿ ಸರ್ಕಾರ 10 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಬೇಕು. ಎತ್ತರದ ಪ್ರದೇಶದಲ್ಲಿ ಮನೆ ಕಟ್ಟಿಕೊಡಲು ಸಂತ್ರಸ್ತರು ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸಿ, ಸರ್ಕಾರಿ ಭೂಮಿಯ ಸ್ವಾದೀನ ಪ್ರಕ್ರಿಯೆ ಆರಂಭಿಸಬೇಕು ಎಂದರು.
ಹಲವೆಡೆ ಹಾನಿ: ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ತುರ್ತಾಗಿ 10 ಸಾವಿರ ಕೋಟಿ ರೂ ಘೋಷಿಸಬೇಕು. ಜತೆಗೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ರಾಜ್ಯ ಸರ್ಕಾರ ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು. 2 ಕೋಟಿ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಪ್ರವಾಹ ಪೀಡಿತ ಭಾಗಗಳಿಗೆ ನಾವು ಪ್ರವಾಸ ಕೈಗೊಂಡಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಪ್ರವಾಹದಿಂದ ತೀವ್ರ ಹಾನಿಯುಂಟಾಗಿದೆ. ಮೈಸೂರು, ಹುಣಸೂರು, ಪಿರಿಯಾಪಟ್ಟಣದಲ್ಲೂ ಪ್ರವಾಸ ಮಾಡಿದ್ದೇವೆ. ಕೊಡಗಿನ ವಿರಾಜಪೇಟೆಗೂ ಭೇಟಿ ನೀಡಿದ್ದೆವು. ಎಲ್ಲಾ ಕಡೆಯೂ ಪ್ರವಾಹದಿಂದ ಸಾಕಷ್ಟು ನಷ್ಟವಾಗಿದೆ. 22 ಜಿಲ್ಲೆಗಳ 103 ತಾಲೂಕು ನೆರೆಯಿಂದ ತತ್ತರಿಸಿವೆ. ಹೀಗಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು.
ರಾಜ್ಯ ಹಾಗು ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆಯಡಿ ಪರಿಹಾರ ನೀಡಬೇಕು. ಬೆಳೆ ಹಾನಿ ಕುರಿತು ಜಿಲ್ಲಾಡಳಿತ ಸಮಿತಿ ರಚನೆ ಮಾಡಬೇಕು. ಸಮಿತಿ ವರದಿಯನ್ನ ವಿಮಾ ಕಂಪನಿಗಳಿಗೆ ಸಲ್ಲಿಸಬೇಕು.15 ದಿನಗಳ ಒಳಗೆ ಶೇ.25 ಪರಿಹಾರ ಹಣವನ್ನು ವಿಮಾ ಕಂಪನಿಗಳು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು. ಫಸಲ್ ಬಿಮಾ ಯೋಜನೆಯ ನಿಯಮಾವಳಿ ಬಗ್ಗೆ ರೈತರಿಗೆ ಗೊತ್ತಿಲ್ಲ. ಜಿಲ್ಲಾಡಳಿತವೇ ಸಮಿತಿ ರಚಿಸಿ, ಸಮೀಕ್ಷೆ ನಡೆಸಬೇಕು. ಸಮಿತಿಯ ವರದಿ ಆಧರಿಸಿ ವಿಮೆ ಭರಿಸಬೇಕು. ಎಕರೆಗೆ 20 ಸಾವಿರದಂತೆ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಈಶ್ವರ್ ಖಂಡ್ರೆ ಹೇಳಿದ್ರು.
ಈ ವೇಳೆ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.