ಬೆಂಗಳೂರು: 20210-21ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಆಯ್ಕೆಗೆ 2021-22ನೇ ಸಾಲಿನ ಸಿಇಟಿ ಪುನರಾವರ್ತಿತರಾಗಿ ಹಾಜರಾದವರಿಗೆ ನೆರವಾಗುವಂತಹ ವರದಿಯನ್ನು ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದೆ.
2020-21ನೇ ಸಾಲಿನ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸಾಮಾನ್ಯ ಅಭ್ಯರ್ಥಿಗಳಂತೆ ಪರಿಗಣಿಸಿ ಹೊಸದಾಗಿ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಬಿ. ತಿಮ್ಮೇಗೌಡರ ಅಧ್ಯಕ್ಷತೆಯ ಐವರ ಸಮಿತಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಸೂತ್ರವೊಂದನ್ನು ಸಿದ್ಧಪಡಿಸಿದೆ. ಸಿಇಟಿ ರ್ಯಾಂಕಿಂಗ್ ಸಮಸ್ಯೆ ಪರಿಹರಿಸಲು ಅಗತ್ಯವಾದ ಸಮನ್ವಯ ಸೂತ್ರವೊಂದನ್ನು ರೂಪಿಸಿರುವುದಾಗಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಸಲ್ಲಿಸಲಾಯಿತು. ವರದಿ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಇದೇ 23ಕ್ಕೆ (ಶುಕ್ರವಾರ) ಮುಂದೂಡಿತು.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ, 2020-21ನೇ ಸಾಲಿನಲ್ಲಿ ದ್ವಿತೀಯ ಪಿಯು ತೇರ್ಗಡೆಯಾದ ವಿದ್ಯಾರ್ಥಿಗಳು ಗಳಿಸಿದ ಶೇ.50 ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಪಡೆದ ಶೇ.50ರಷ್ಟು ಅಂಕಗಳನ್ನು ಪರಿಗಣಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಏಕಸದಸ್ಯ ಪೀಠ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
(ಓದಿ: ಸಿಇಟಿ ಸೀಟು ಹಂಚಿಕೆಯಲ್ಲಿ ರಿಪೀಟರ್ಸ್ಗಳ ಪಿಯುಸಿ ಅಂಕ ಪರಿಗಣನೆ: ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಸರ್ಕಾರದ ಮೇಲ್ಮನವಿ)