ಬೆಂಗಳೂರು : ಸರ್ಕಾರಗಳು ಬದಲಾದಗೆಲ್ಲಾ ವಾಹನಗಳ ಖರೀದಿಗಾಗಿ ಕೋಟ್ಯಾಂತರ ರೂ. ವೆಚ್ಚ ಮಾಡಲಾಗುತ್ತಿದ್ದು, ವಾಹನಗಳ ರಿಪೇರಿ ಹೆಸರಿನಲ್ಲಿಯೂ ಸಾಕಷ್ಟು ಹಣ ಪೋಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ದೂರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ವಾಹನಗಳ ರಿಪೇರಿ ಮತ್ತು ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ 1.34 ಕೋಟಿ ರೂ. ವೆಚ್ಚ ಮಾಡಿದ್ದರು. ಅಲ್ಲದೆ ಸಚಿವರಾಗಿದ್ದ ಯು.ಟಿ. ಖಾದರ್ ಅವರ ವಾಹನ ರಿಪೇರಿಗೆ 5.80 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ದೂರಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಚಿವರುಗಳ ಉಪಯೋಗಕ್ಕಾಗಿ ಹೊಸದಾಗಿ 10 ಕ್ರಿಸ್ಟಾ, 8 ಇನ್ನೋವಾ ಮತ್ತು 2 ಫಾರ್ಚ್ಯೂನರ್ ವಾಹನಗಳನ್ನು ಖರೀದಿಸಲಾಗಿದೆ. ಅಲ್ಲದೆ ಮುಖ್ಯಮಂತ್ರಿಗಳ ಕಚೇರಿಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಒಟ್ಟು 20 ವಾಹನಗಳನ್ನು ಬಳಸಲಾಗಿದೆ. ಈ ವಾಹನಗಳ ರಿಪೇರಿ ವೆಚ್ಚಕ್ಕೆಂದು 39.76 ಲಕ್ಷ ರೂ. ಭರಿಸಲಾಗಿದೆ ಎಂದರು.
ಸಚಿವರು ಉಪಯೋಗಿಸುವ ವಾಹನಗಳ ಇಂಧನ ವೆಚ್ಚಕ್ಕಾಗಿ ಪ್ರತಿ ಕಿ.ಮೀಗೆ 25 ರೂ. ನೀಡಲಾಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣ ಪೋಲಾಗುತ್ತಿದೆ ಎಂದು ಆರೋಪಿದರು.