ಬೆಂಗಳೂರು: ಉಡುಪಿ ಕಾಲೇಜಿನಲ್ಲಿ ಸಮವಸ್ತ್ರ ವಿವಾದ ಹಿನ್ನೆಲೆ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿ ಸಂಬಂಧ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿಯು ನಿರ್ದೇಶಕಿಗೆ ಸಮಿತಿ ರಚಿಸುವಂತೆ ನಿರ್ದೇಶನ ನೀಡಿದ್ದಾರೆ. ಉಡುಪಿ ಕಾಲೇಜಿನಲ್ಲಿನ ಹಿಜಾಬ್ ವಿವಾದದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ, ಕಡ್ಡಾಯಗೊಳಿಸಿಲ್ಲ.
ಆದರೆ, ತಮ್ಮ ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವ ಉಡುಪಿ ಜಿಲ್ಲೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ಪಡೆಯುವ ವೇಳೆ ಕಾಲೇಜು ನಿಗದಿ ಮಾಡಿದ್ದ ಸಮವಸ್ತ್ರ/ವಸ್ತ್ರ ಸಂಹಿತೆಯ ಕುರಿತು ಮಾಹಿತಿ ಇದ್ದು, ಅದನ್ನು ಒಪ್ಪಿಯೇ ಸ್ವ ಇಚ್ಛೆಯಿಂದ ಕಾಲೇಜಿಗೆ ದಾಖಲಾತಿಯನ್ನು ಪಡೆದಿರುತ್ತಾರೆ. ಆದರೆ, ಇಷ್ಟು ದಿನಗಳು ಇಲ್ಲದ ಗೊಂದಲವನ್ನು ಈಗ ಹೊಸದಾಗಿ ಸೃಷ್ಟಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳಿತಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ಪದವಿಪೂರ್ವ ತರಗತಿಗಳ ವಿದ್ಯಾರ್ಥಿಗಳಿಗೆ ಜಾರಿಯಲ್ಲಿರುವ ಸಮವಸ್ತ್ರ ನೀತಿ ಸಂಹಿತೆಯನ್ನು ಪರಿಶೀಲಿಸಲು ಹಾಗು ಈ ಕುರಿತು ಸುಪ್ರೀಂ ಕೋರ್ಟ್, ವಿವಿಧ ರಾಜ್ಯಗಳ ಹೈಕೋರ್ಟ್ ತೀರ್ಪುಗಳನ್ನು ಅವಲೋಕಿಸಿ, ರಾಜ್ಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಥವಾ ವಸ್ತ್ರ ಸಂಹಿತೆಯನ್ನು ನಿಗದಿಗೊಳಿಸುವ ಕುರಿತಂತೆ ಚಿಂತನ-ಮಂಥನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಅಗತ್ಯವಾಗಿರುತ್ತದೆ.
ಸಮಿತಿ ಅಧ್ಯಯನ ನಡೆಸಿ, ಸಲ್ಲಿಸಲಾಗುವ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಈ ಪ್ರಕ್ರಿಯೆಯಾಗುವವರೆಗೂ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ತನ್ನ ಸಂಸ್ಥೆಯ ಹಂತದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಿಗದಿಗೊಳಿಸಿರುವ ಸಮವಸ್ತ್ರವನ್ನು ಸಂಹಿತೆಯ ವಿಷಯದಲ್ಲಿ ಯಥಾ ಸ್ಥಿತಿಯನ್ನು ಮುಂದುವರೆಸಲು ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ.
ಓದಿ: ಗಾಂಜಾ, ಮಟ್ಕಾ ಹಾಗೂ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವ ಯೋಜನೆ ಇದೆ: ಎಸ್ಪಿ ಲಕ್ಷ್ಮೀ ಪ್ರಸಾದ್