ಬೆಂಗಳೂರು : ಜಾತಿ ಇರುವವರಿಗೆ ಮೀಸಲಾತಿ ನೀಡಬೇಕು. ಎಸ್ಸಿ-ಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕಾ ಎಂದು ಹರಿಹರದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ನಗರದ ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಯಿಖಾನೆ ತೊಳೆಯುವುದನ್ನು ಕೆಲಸವೆಂದು ಪರಿಗಣಿಸಬೇಕು. ಮೇಲ್ವರ್ಗದವರು ಇದನ್ನು ಕೆಲಸವೆಂದು ಅರಿಯಬೇಕು. ಹಾಗಾದಾಗ ಮಾತ್ರ ಶೋಷಣೆ ನಿಲ್ಲುತ್ತದೆ. 30 ವರ್ಷದಿಂದ ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಇವರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಹಿಂದಿನ ಸರ್ಕಾರ ಎಸ್ಸಿಪಿ, ಟಿಎಸ್ಪಿ ಜಾರಿಗೆ ತಂದಿತ್ತು. ಈಗ ನಮಗೆ ಮೀಸಲು ಹೆಚ್ಚಳವಾಗಬೇಕು. ನಮ್ಮ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲು ಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳವಾಗಬೇಕು. ಹೆಚ್ಚಳದ ಬಗ್ಗೆ ಸರ್ಕಾರ ಆಯೋಗ ರಚಿಸಿದೆ.
ಉಪಸಮಿತಿಗೆ ಬಂದಾಗ ನಮಗೆ ನೋವಾಯ್ತು. ಈಗ ಉನ್ನತ ಮಟ್ಟದ ಸಮಿತಿಗೆ ಹೋಗಿದೆ. ಸಿಎಂ ಮೇಲೆ ನಮಗೆ ನಂಬಿಕೆಯಿದೆ. ಆದಷ್ಟು ಬೇಗ ಮೀಸಲಾತಿ ಘೋಷಣೆಗೆ ನಿರ್ಧಾರ ಕೈಗೊಳ್ಳಬೇಕು. ಯಾವುದೇ ರೀತಿಯ ಒತ್ತಡಕ್ಕೂ ಮಣಿಯದೆ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಸನ್ನಾನಂದಪುರಿ ಶ್ರೀ ಮನವಿ ಮಾಡಿದರು.
ನಮ್ಮದು ನ್ಯಾಯಯುತ ಬೇಡಿಕೆ
ಆರ್ಥಿಕವಾಗಿ ಸಬಲರಾದವರು ಮೀಸಲಾತಿಗೆ ಪ್ರಯತ್ನಿಸ್ತಿದ್ದಾರೆ. ಆದರೆ, ನಾವು ನ್ಯಾಯಯುತವಾಗಿ ಕೇಳುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ನೀವು ಈಡೇರಿಸಬೇಕು ಎಂದು ಸಿಎಂಗೆ ನೆನಪು ಮಾಡಿಕೊಟ್ಟ ಪ್ರಸನ್ನಾನಂದಪುರಿ ಶ್ರೀ, ಸರ್ಕಾರ ಯಾವುದೇ ಸಂದರ್ಭದಲ್ಲಿಯೂ ತಮ್ಮ ಬೇಡಿಕೆ ವಿಚಾರವಾಗಿ ಹಿಂದೇಟು ಹಾಕಬಾರದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು, ಸರ್ಕಾರ ಪರಿಶಿಷ್ಟ ವರ್ಗಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿಸಿದೆ. ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಟ್ಟಿದೆ. ಮೀಸಲು ನೀಡುವ ವಿಚಾರದಲ್ಲಿ ಯಾವತ್ತೂ ಬದ್ಧವಾಗಿದ್ದು, ಈ ವಿಚಾರದಲ್ಲಿ ಆತಂಕ ಬೇಡ. ಸರ್ಕಾರ ನಿಮ್ಮೊಂದಿಗೆ ಇರಲಿದೆ ಎಂಬ ಭರವಸೆ ನೀಡಿದರು.
ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಮೀಸಲಾತಿ ವಿಚಾರವಾಗಿ ಯಾವುದೇ ಆತಂಕ ಬೇಡ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂಬ ಭರವಸೆ ನೀಡಿದ್ದರು.
ಇದನ್ನೂ ಓದಿ: ರಾಜ್ಯಾದ್ಯಂತ ನಾಳೆ ಶಿಕ್ಷಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ..!