ಬೆಂಗಳೂರು: ಯಶವಂತಪುರ ಹೋಬಳಿಯ ಮಲ್ಲಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ 35.39 ಎಕರೆ ಸರ್ಕಾರಿ ಜಮೀನಿನ ಸುತ್ತಮುತ್ತ ಒತ್ತುವರಿಯಾಗಿರುವ ಜಾಗ ತೆರವುಗೊಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಗ್ರಾಮದ ಸರ್ವೆ ನಂಬರ್ 33ರಲ್ಲಿರುವ ಅಂದಾಜು 200 ಕೋಟಿ ರೂ.ಗೂ ಅಧಿಕ ಮೌಲ್ಯದ 35 ಎಕರೆ 39 ಗುಂಟೆ ಸರ್ಕಾರಿ ಜಮೀನಿನ ಸುತ್ತಮುತ್ತ ಪ್ರಭಾವಿ ವ್ಯಕ್ತಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ತೆರವು ಮಾಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸ್ಥಳೀಯ ಸಂಘಟನೆ ಮುತ್ತು ಮಾರಿಯಮ್ಮ ಚಾರಿಟಬಲ್ ಟ್ರಸ್ಟ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ ಭೂಮಿಯನ್ನು ಕ್ರೀಡಾಂಗಣ, ಉದ್ಯಾನವನ ಮತ್ತಿತರ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಬಿಬಿಎಂಪಿಗೆ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿತ್ತು.
ಅರ್ಜಿದಾರರ ಪರ ವಾದಿಸಿದ್ದ ವಕೀಲ ಎಂ. ಶಿವಪ್ರಕಾಶ್, ಮಲ್ಲಸಂದ್ರ ಗ್ರಾಮದಲ್ಲಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಕಂದಾಯ ಇಲಾಖೆ ಸರ್ಕಾರಿ ಬಂಡೆ ಮತ್ತು ಖರಾಬು ಭೂಮಿ ಎಂದು ವರ್ಗೀಕರಿಸಿದೆ. ಸದ್ಯ ಈ ಜಾಗವನ್ನು ಭೂ ಕಬಳಿಕದಾರರು ಜನಪ್ರತಿನಿಧಿಗಳ ನೆರವಿನೊಂದಿಗೆ ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ದೂರು ನೀಡಿದ್ದರೂ ಸಂಬಂಧಪಟ್ಟ ಇಲಾಖೆಗಳು ಮುಂದಾಗುತ್ತಿಲ್ಲ. ಹೀಗಾಗಿ, ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಬಿಬಿಎಂಪಿ ವ್ಯಾಪ್ತಿಗೆ ಜಾಗ ಒಳಪಡಿಸಿದರೆ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಬಳಸಿಕೊಳ್ಳಬಹುದು. ಪಾಲಿಕೆಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.
ಪಿಐಎಲ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ, ಒತ್ತುವರಿಯನ್ನು ತೆರವು ಮಾಡಿ ಭೂಮಿಯನ್ನು ಸಂರಕ್ಷಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಇನ್ನು ಜಮೀನನ್ನು ಬಿಬಿಎಂಪಿಗೆ ವರ್ಗಾವಣೆ ಮಾಡಬೇಕು ಎಂಬ ಮನವಿ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಪೀಠ ಸೂಚಿಸಿದೆ.