ಬೆಂಗಳೂರು: ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಬಹು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಐಎಂಬಿ ವತಿಯಿಂದ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಕೋರ್ಸ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ವೈದ್ಯ ಸಮೂದಾಯಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯ ಕೋರಿದ ಆರೋಗ್ಯ ಸಚಿವರು, ಐಐಎಮ್ ಬೆಂಗಳೂರು ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿ ಉತ್ಕೃಷ್ಟ ತರಬೇತಿ ಹಾಗೂ ತರಗತಿಗಳನ್ನು ನಡೆಸುತ್ತಾ ಬಂದಿದೆ. ಸಂಸ್ಥೆಯ ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರ ಕಾರ್ಯದ ಬಗ್ಗೆ ಕಾರ್ಯಕ್ರಮದಲ್ಲಿ ಸಚಿವರು ಶ್ಲಾಘನೆ ವ್ಯಕ್ಯಪಡಿಸಿದರು.
ರಾಜ್ಯದಲ್ಲಿ ಉತ್ಕೃಷ್ಟ ಆರೋಗ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವನಾಗಿ ನಾನು ಹೆಚ್ಚು ಉತ್ತೇಜನ ನೀಡುತ್ತೇನೆ. ಹಿರಿಯ ಸರ್ಕಾರಿ ಆರೋಗ್ಯ ವೃತ್ತಿಪರರು ಐಐಎಂಬಿ ಹಾಸ್ಪಿಟಲ್ ನಿರ್ವಹಣೆ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುವಂತೆ ಸೂಚನೆ ನೀಡಲಿದ್ದೇನೆ. ಸಾರ್ವಜನಿಕ ಆರೋಗ್ಯ ಆಡಳಿತದಲ್ಲಿ ನಮ್ಮ ರಾಜ್ಯದ ಭವಿಷ್ಯವನ್ನು ರೂಪಿಸಲು IIM ನ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ತರಬೇತಿ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಿಕಲ್ ಅನೀಮಿಯಾ ರೋಗ:ಇದೇ ಸಂದರ್ಭ ಆರೋಗ್ಯ ಇಲಾಖೆಯಡಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಸಚಿವರು, ಸಿಕಲ್ ಅನೀಮಿಯಾ ರೋಗದ ಬಗ್ಗೆ ಈಗಾಗಲೇ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸಹ ಕೇಂದ್ರ ಸರ್ಕಾರವು ದೇಶಾದ್ಯಂತ ಕಾರ್ಯಕ್ರಮವನ್ನು ಇಂದು ಜಾರಿಗೊಳಿಸುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಯೋಜನೆಯ ಆರಂಭವನ್ನು ಇಂದು ಸಾಕ್ಷೀಕರಿಸುತ್ತಿದ್ದೇವೆ ಎಂದು ಹೇಳಿದರು.
ಈ ರೋಗಕ್ಕೆ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡ ಯೋಜನೆಯ ಅನುಭವವನ್ನು ಕೇಂದ್ರ ಸರ್ಕಾರದ ಜೊತೆ ಹಂಚಿಕೊಂಡು, ಈ ರೋಗದ ವಿರುದ್ಧ ಹೋರಾಡಲು ಪ್ರಯತ್ನಿಸಲಾಗುವುದು. ಸಿಕಲ್ ಅನೀಮಿಯಾ ಒಂದು ಅನುವಂಶಿಕ ರಕ್ತ ಹೀನತೆ ಕಾಯಿಲೆಯಾಗಿದೆ. ಕೆಂಪು ರಕ್ತ ಕಣಗಳು ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುತ್ತವೆ. ಆದರೆ, ಸಿಕೆಲ್ ಸೆಲ್ ಅನಿಮಿಯಾ ರೋಗದಲ್ಲಿ ಕೆಂಪು ರಕ್ತ ಕಣಗಳ ಆಕಾರದಲ್ಲಿ ಪರಿಣಾಮ ಬೀರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಭಾರತದಲ್ಲಿ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಲ್ಲಿ ಸಿಲ್ ಅನೀಮಿಯಾ ಹೆಚ್ಚು ಪ್ರಚಲಿತವಾಗಿದೆ. ಸಾಮಾನ್ಯ ಬುಡಕಟ್ಟು ಅಲ್ಲದ ಸಮುದಾಯಗಳಲ್ಲಿಯೂ ಸಹ ಕಂಡು ಬರುತ್ತದೆ. ಭಾರತವು ಜಾಗತಿಕವಾಗಿ ಅತಿಹೆಚ್ಚು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿದೆ. ದೇಶದಲ್ಲಿ ಸುಮಾರು 67.8 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಗುಜರಾತ್, ರಾಜಸ್ಥಾನ, ಜಾರ್ಖಂಡ್, ಛತೀಸ್‌ಗಢ, ಪಶ್ಚಿಮಬಂಗಾಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ.
ಕರ್ನಾಟಕದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಐಟಿಡಿಪಿ ಕಾರ್ಯಕ್ರಮದಡಿ ಸಿಕಲ್ ಸೆಲ್ ಅನಿಮಿಯಾ ರೋಗವನ್ನ ಪತ್ತೆ ಹಚ್ಚಲು ಚಾಮರಾಜನಗರ, ಮೈಸೂರು ಇಟರ್ಸ್, ಚಿಕ್ಕಮಗಳೂರು ಮತ್ತು ಉಡುಪಿ 5 ಜಿಲ್ಲೆಗಳ ಬುಡಕಟ್ಟು ಜನರಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಅಡಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ 2016ನೇ ಸಾಲಿನಲ್ಲಿ ಸಿಕಲ್ ಸೆಲ್ ಅನಿಮಿಯಾ ಕಾರ್ಯಕ್ರಮ ಅನುಷ್ಠಾನಗೊಳಿಸಿತ್ತು.
ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯದ 05 ಜಿಲ್ಲೆಗಳಾದ (ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಮಂಗಳೂರು) ಇಲ್ಲಿ ಸಿಕಲ್ ಸೆಲ್ ಅನೀಮಿಯಾ ಕಾಯಲೆಯಿಂದ ಬಳಲುತ್ತಿರುವ ರೋಗಿಗಳ ರೋಗ ತಪಾಸಣೆ ಪತ್ತೆ ಹಚ್ಚುವ ಅಭಿಯಾನ ನಡೆಸಲಾಯಿತು. ಸದರಿ 5 ಜಿಲ್ಲೆಗಳಲ್ಲಿ ಈ ಕೆಳಕಂಡಂತೆ ತಪಾಸಣೆ ನಡೆಸಲಾಗಿದೆ.
2480 ಸಿಕಲ್ ಕೋಶ ಪಲಾನುಭವಿಗಳಿಗೆ ಗುಣಲಕ್ಷಣ ವಂಶವಾಹಿ ಕೌನ್ಸೆಲಿಂಗ್ ಮಾಡಲಾಗಿತ್ತು. ಸದರಿ 342 ಸಿಕಲ್ ಸೆಲ್ ಅನಿಮಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ (ಮುಖ್ಯವಾಗಿ ಹೈಡ್ರಾಕ್ಸಿಯುರಿಯಾ ಮಾತ್ರೆಗಳು ಮತ್ತು ಹೆಚ್ಚುವರಿ ರೋಗ ನಿರೋಧಕಗಳು ಇತ್ಯಾದಿ) ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ವಿಕಲಚೇತನರು ಎಂದು ಗುರುತಿಸಲು ಮತ್ತು ಅವರು ಯುಡಿಐಡಿ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಮಾನಸಿಕ ಪಿಂಚಣಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಶೇಕಡಾ 50 ರಷ್ಟು ರಿಯಾಯಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬ್ರ್ಯಾಂಡ್ ಬೆಂಗಳೂರು: ಅಭಿಪ್ರಾಯ - ಅನಿಸಿಕೆ- ಸಲಹೆ ನೀಡುವ ಅವಧಿ ಜುಲೈ 15 ರವರೆಗೆ ವಿಸ್ತರಣೆ