ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿಯೂ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇಡಿಸಲು ಒಪ್ಪಿಗೆ ಸೂಚಿಸಿದೆ. ಸರ್ಕಾರ ನೌಕರರ ಪರ ಇರುವುದಕ್ಕೆ ಇದೇ ಸಾಕ್ಷಿ ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಮಯದಲ್ಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಸಾರಿಗೆ ಸಚಿವರು ನೌಕರರ ಕುಟುಂಬಗಳು ತೊಂದರೆಗೆ ಒಳಗಾಗಬಾರದೆಂದು ಆರ್ಥಿಕ ಸಂಕಷ್ಟದಲ್ಲೂ ವೇತನವನ್ನು ಬಿಡುಗಡೆ ಮಾಡಿ ಮಾನವೀಯತೆ ಮೆರೆದಿದ್ದರು. ಕೋವಿಡ್ ಸಂಕಷ್ಟದಿಂದ ಸರ್ಕಾರ ಸಾಕಷ್ಟು ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಹಣಕಾಸಿನ ಸಂಪನ್ಮೂಲದ ಕ್ರೋಢೀಕರಣ ಸಮಸ್ಯೆ ವಿಚಾರ ಸಾರಿಗೆ ನೌಕರರ ಗಮನಕ್ಕೂ ಇದೆ. ಇಂತಹ ಸಮಯದಲ್ಲೂ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು, ಸಂತಸದ ವಿಚಾರ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸಚಿವ ಚವ್ಹಾಣ್ ತಿಳಿಸಿದ್ದಾರೆ.
ಓದಿ: ರಾಜ್ಯದಲ್ಲಿ ಗೋ ಹತ್ಯೆ ಆಗಲು ಬಿಡಲ್ಲ, ಮೂಕ ಪ್ರಾಣಿಗಳ ರಕ್ಷಣೆಗೆ ಸರ್ಕಾರ ಸದಾ ಸಿದ್ಧ: ಪ್ರಭು ಚೌವ್ಹಾಣ್
ಸಾರಿಗೆ ನೌಕರರನ್ನು ಎರಡು ಗುಂಪುಗಳಾಗಿ ಮಾಡಿ ರಾಜಕೀಯ ದುರುದ್ದೇಶಕ್ಕೆ ಈ ಪ್ರತಿಭಟನೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ಬಳಸಿಕೊಂಡರು. ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ನೌಕರರೊಂದಿಗಿದ್ದು ಆತಂಕ ಪಡುವ ಅಗತ್ಯವಿರಲಿಲ್ಲ. ಸರ್ಕಾರದ ಹಂತದಲ್ಲಿ ಎಲ್ಲವನ್ನು ಚರ್ಚೆ ಮಾಡಿ ಬಗೆಹರಿಸಿದ್ದಾರೆ. ಹೋರಾಟಗಾರರು ಎಂದೂ ಅವರಿವರ ಮಾತಿಗೆ ಕಿವಿಗೊಡಬಾರದು. ತಮ್ಮದಲ್ಲದ ಹೋರಾಟದ ಚುಕ್ಕಾಣಿ ಹಿಡಿದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಹಸಿರು ಸೇನೆ ಅಧ್ಯಕ್ಷ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಸಾರಿಗೆ ನೌಕರರನ್ನು ಎತ್ತಿಕಟ್ಟಿದ್ದು, ಅವರ ಘನತೆಗೆ ತಕ್ಕದ್ದಲ್ಲ ಎಂದು ಕೋಡಿಹಳ್ಳಿ ವಿರುದ್ಧ ಚವ್ಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.