ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಏಪ್ರಿಲ್ ತಿಂಗಳ ಸಂಬಳ ನಿಗದಿಯಂತೆ ಪಾವತಿಯಾಗುವುದು ಖಚಿತವಾಗಿದೆ. ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿ ಏಕರೂಪ್ ಕೌರ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಈ ಬಾರಿ ಸರ್ಕಾರಿ ನೌಕರರ ಸಂಬಳ ಪಾವತಿಯಾಗುವುದು ತಡವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ರಾಜ್ಯದ ಹಣಕಾಸು ಇಲಾಖೆಯು ಬಜೆಟ್ನ 12 ನೇ 1 ರಷ್ಟು ಹಣಕಾಸು ಬಿಡುಗಡೆಗೆ ಆದೇಶ ಹೊರಡಿಸಿದ್ದರಿಂದ ಸಂಬಳ ಪಾವತಿಯು ಖಚಿತವಾದಂತಾಗಿದೆ. ಲಾಕ್ಡೌನ್ನಿಂದಾಗಿ ಸರ್ಕಾರದ ಖಜಾನೆಗೆ ಬರುತ್ತಿದ್ದ ಆದಾಯದ ಮೂಲಗಳು ಬಂದ್ ಆಗಿದ್ದರೂ ತನ್ನ ನೌಕರರ ಸಂಬಳಗಳನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು.
ಪ್ರಸ್ತುತ ಪರಿಸ್ಥಿತಿಯಲ್ಲಿ ನೌಕರರ ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ಆಹಾರ ಭದ್ರತೆ ಯೋಜನೆ ಹಾಗೂ ಅತಿ ಅಗತ್ಯ ಖರ್ಚುಗಳಿಗಾಗಿ ಮಾತ್ರ ಸರ್ಕಾರ ತನ್ನ ಸೀಮಿತ ಹಣಕಾಸು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಇನ್ನುಳಿದ ಎಲ್ಲ ರೀತಿಯ ಖರ್ಚುಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ.