ಬೆಂಗಳೂರು : ಲಾಕ್ಡೌನ್ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬರೆ ಎಳೆದಿದೆ. ಈ ಸಂದರ್ಭದಲ್ಲಿ ಸರ್ಕಾರ ಸೇವಾ ಸಿಂಧು ಮೂಲಕ ಚಾಲಕರಿಗೆ 5 ಸಾವಿರ ರೂ. ನೀಡಲಾಗುವುದು ಎಂದು ಹೇಳಿತ್ತು. ಇದರ ಮೂಲಕ ಒಟ್ಟು 2,37,313 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳು ಸಂಖ್ಯೆ 937, ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಕೆಯಾದ್ರೂ ಹಣ ಬಿಡುಗಡೆ ಮಾಡದೆ ಸರ್ಕಾರ ವಿರೋಧಿ ಧೋರಣೆ ಎಸಗುತ್ತಿದೆ ಎಂದು ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಆರೋಪಿಸಿದ್ದಾರೆ.
ರಾಜ್ಯದಲ್ಲಿ 2.34 ಲಕ್ಷ ಆಟೋ ಹಾಗೂ 4.33 ಲಕ್ಷ ಟ್ಯಾಕ್ಸಿ ಚಾಲಕರಿದ್ದಾರೆ. ಆಟೋ-ಟ್ಯಾಕ್ಸಿ ಚಾಲಕರಿಗೆ ತಲಾ ಐದು ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿ 3 ತಿಂಗಳು ಕಳೆದಿದೆ. ಚಾಲಕರಿಗೆ ಛಾರ್ಸಿ ನಂಬರ್, ಆಧಾರ್, ಪ್ಯಾನ್ ಎಂದು ಕಾಲಹರಣ ಮಾಡುವ ಮೂಲಕ ಹಲವು ದಿನ ಚಾಲಕರನ್ನು ಸರ್ಕಾರ ಗೊಂದಲದಲ್ಲಿ ಸಿಕ್ಕಿಸಿತ್ತು.
ಈ ಮುಂಚೆಯೇ ರಾಜ್ಯ ಸರ್ಕಾರ ಸೇವಾ ಸಿಂಧು ಆ್ಯಪ್ ಮೂಲಕ ಚಾಲಕರು ಅರ್ಜಿ ಸಲ್ಲಿಸುವ ಕಾಲಂನನ್ನು ತೆಗೆದುಹಾಕಿ ದ್ರೋಹ ಬಗೆದಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 387 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಕೇವಲ 60 ಕೋಟಿ ಹಣ ಬಿಡುಗಡೆ ಮಾಡಿ ಚಾಲಕರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಸರ್ಕಾರ ಎಲ್ಲಾ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿರುವ ಚಾಲಕರಿಗೆ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.