ಯಲಹಂಕ: ತಾಲೂಕಿನ ಮಾವಳ್ಳಿಪುರದಲ್ಲಿ ಕೊರೊನಾ ಸೋಂಕಿತರ ಶವ ಸಂಸ್ಕಾರ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಸುತ್ತಮುತ್ತಲಿನ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಹಿಂದಿನಿಂದ ಬಿಬಿಎಂಪಿ ಕಸವನ್ನು ಡಂಪಿಂಗ್ ಮಾಡಲಾಗುತ್ತಿತ್ತು. ಬಿಬಿಎಂಪಿ ಕಸ ವಿಲೇವಾರಿಯ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಡಂಪಿಂಗ್ ಯಾರ್ಡ್ ತೆರವು ಮಾಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ರು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಡಂಪಿಂಗ್ ಯಾರ್ಡ್ ಬಳಿಯೇ ಕೊರೊನಾ ಸೋಂಕಿತರ ಶವ ಸಂಸ್ಕಾರ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆದರೆ ಗ್ರಾಮಸ್ಥರು ಕೊರೊನಾ ಸೋಂಕಿತರ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.
ಬಿಬಿಎಂಪಿ ಕಸದಿಂದ ಮಾವಳ್ಳಿಪುರದ ಸುತ್ತಮುತ್ತಲಿನ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 50ರಿಂದ 60ಕ್ಕೂ ಹೆಚ್ಚು ಜನ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಿಬಿಎಂಪಿ ಕಸದಿಂದ ಈಗಾಗಲೇ ಕಂಗಾಲಾಗಿರುವ ಜನರು ಈಗ ಪ್ರಾರಂಭವಾಗುವ ಕೊರೊನಾ ಸೋಂಕಿತರ ಶವ ಸಂಸ್ಕಾರದಿಂದ ಬರುವ ತ್ಯಾಜ್ಯದಿಂದ ಪರಿಸರ ಮತ್ತಷ್ಟು ಹಾಳಾಗುತ್ತೆ. ಶವ ಸಂಸ್ಕಾರವನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.