ಬೆಂಗಳೂರು: ಸರ್ಕಾರದ ಸೂಚನೆ ಮೇರೆಗೆ ಮಂಗಳವಾರ ವಿಧಾನಪರಿಷತ್ ಅಧಿವೇಶನ ಕರೆಯಲಾಗಿದೆ.
ಡಿ.15ರವರೆಗೆ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಡಿ.10 ರಂದೆ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಸಭಾಪತಿಗಳ ಪದಚ್ಯುತಿ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಮಂಡನೆ ಆಗಬೇಕಿತ್ತು. ಆದರೆ, ಸಭಾಪತಿಗಳು ದಿಢೀರ್ ಅಧಿವೇಶನ ಮುಂದೂಡಿದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ದೂರು ಸಲ್ಲಿಸಿತ್ತು. ಅಲ್ಲದೇ ವಿಧಾನ ಪರಿಷತ್ ಅಧಿವೇಶನ ಕರೆಯುವಂತೆ ನಿರ್ದೇಶನ ನೀಡಬೇಕೆಂದು ನಿಯೋಗ ಕೋರಿತ್ತು.

ಓದಿ : ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಮುಕ್ತ ಆಹ್ವಾನ ನೀಡಿದ ಡಿಸಿಎಂ ಲಕ್ಷ್ಮಣ ಸವದಿ
ಈ ಸಂಬಂಧ ಮಂಗಳವಾರ ಒಂದು ದಿನದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿ ಅಧಿವೇಶನ ಕರೆದಿದೆ. ಅಧಿವೇಶನ ಕಾರ್ಯದಿಂದ ಮುಖ್ಯ ಉದ್ದೇಶ ಸಭಾಪತಿಗಳ ಪದಚ್ಯುತಿ ವಿಚಾರ ಚರ್ಚೆಯೇ ಪ್ರಮುಖವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಲು ನಿರ್ಧರಿಸಿದೆ ಎಂಬ ಮಾಹಿತಿ ಇದೆ. ಮಂಗಳವಾರ ಅಧಿವೇಶನ ಕರೆದಿರುವ ವಿಚಾರವನ್ನು ಮಾಧ್ಯಮ ಪ್ರಕಟಣೆ ಮೂಲಕ ವಿಧಾನ ಪರಿಷತ್ ಕಾರ್ಯದರ್ಶಿ ಕೆಆರ್ ಮಹಾಲಕ್ಷ್ಮಿ ವಿಧಾನಪರಿಷತ್ ಶಾಸಕರಿಗೆ ಮಾಹಿತಿ ನೀಡಿದ್ದಾರೆ.