ಬೆಂಗಳೂರು: ಮತಪರಿಷ್ಕರಣೆ ಹೆಸರಲ್ಲಿ ಖಾಸಗಿ ಮಾಹಿತಿ ಕಳವು ಪ್ರಕರಣ ಸಂಬಂಧ ಚುನಾವಣಾ ಆಯೋಗದ ಸೂಚನೆ ಮೇರೆಗೆ ಅಮಾನತುಗೊಂಡಿದ್ದ ಬೆಂಗಳೂರು ನಗರ ಡಿಸಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರ ಸ್ಥಾನಕ್ಕೆ ರಾಜ್ಯ ಸರ್ಕಾರ ಸಂಗಪ್ಪ ಹಾಗೂ ಡಾ.ಹರೀಶ್ ಕುಮಾರ್ ಕೆ. ಅವರಿಗೆ ಹೆಚ್ಚುವರಿ ಹೊಣೆ ನೀಡಿ ನೇಮಕ ಮಾಡಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ಸಂಗಪ್ಪರಿಗೆ ಬೆಂಗಳೂರು ನಗರ ಡಿಸಿಯ ಹೆಚ್ಚುವರಿ ಹೊಣೆ ನೀಡಲಾಗಿದ್ದರೆ, ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್.ಕೆ ಅವರಿಗೆ ಬಿಬಿಎಂಪಿ ಆಡಳಿತ ವಿಶೇಷ ಆಯುಕ್ತರ ಹೆಚ್ಚುವರಿ ಹೊಣೆ ನೀಡಲಾಗಿದೆ.
ನ.25ರಂದು ಚಿಲುಮೆ ಸಂಸ್ಥೆಯಿಂದ ಮತದಾರರ ಪರಿಷ್ಕರಣೆಗಾಗಿ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಬೆಂಗಳೂರು ನಗರ ಡಿಸಿ ಹಾಗೂ ಬಿಬಿಎಂಪಿ ಆಡಳಿತ ವಿಶೇಷ ಆಯುಕ್ತರನ್ನು ಅಮಾನತುಗೊಳಿಸಲು ಭಾರತೀಯ ಚುನಾವಣಾ ಆಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು.
ಶಿವಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿಬಿಎಂಪಿ (ಕೇಂದ್ರ) ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಎಸ್.ರಂಗಪ್ಪ ಮತ್ತು ಮಹದೇವಪುರ ಕ್ಷೇತ್ರದ ಉಸ್ತುವಾರಿ ಬೆಂಗಳೂರು ನಗರ ಡಿಸಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಕೂಡಲೇ ಅಮಾನತುಗೊಳಿಸಲು ಸೂಚನೆ ನೀಡಿತ್ತು. ಜತೆಗೆ ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲು ನಿರ್ದೇಶಿಸಿತ್ತು. ಅವರಿಬ್ಬರ ಅಮಾನತಿನಿಂದ ತೆರವಾದ ಸ್ಥಾನಕ್ಕೆ ಇದೀಗ ರಾಜ್ಯ ಸರ್ಕಾರ ಹೊಸ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಚಿಲುಮೆ ಕೇಸ್: ಮತ್ತೋರ್ವ ಆರೋಪಿ ಬಂಧನ.. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ