ಬೆಂಗಳೂರು: ಪರಿಷತ್ನಲ್ಲಿ ನಡೆದ ಅವಿಶ್ವಾಸ ಮಂಡನೆ ವಿಚಾರವಾಗಿ ಬಿಜೆಪಿ ಜೆಡಿಎಸ್ ನಿನ್ನೆಯೇ ಸಭಾಪತಿಗಳಿಗೆ ಮನವಿ ಮಾಡಿದ್ದರು. ಆದರೆ, ಇಂದು ಚರ್ಚೆಗೆ ಆಸ್ಪದ ಕೊಡದೇ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯರು ಗದ್ದಲ ಎಬ್ಬಿಸಿದ್ದು. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ದಿಢೀರ್ ಭೇಟಿ ಮಾಡಿ ಸಭಾಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ನಿಯೋಗದ ಭೇಟಿಗೆ ರಾಜಭವನದ ಸುತ್ತ ಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಮೂಲಕ ರಾಜಭವನದ ಕಡೆ ಹೊರಟು ನಂತರ ವಾಹನಗಳಲ್ಲಿ ರಾಜಭವನ ತಲುಪಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಓದಿ: ಉಪಸಭಾಪತಿ ಕತ್ತು ಹಿಡಿದು ಎಳೆದಾಡಿದ್ದು, ಕಾಂಗ್ರೆಸ್ನ ಸಂಸ್ಕೃತಿ ತೋರಿಸುತ್ತೆ.. ಸಿಎಂ ಬಿಎಸ್‌ವೈ ಕಿಡಿ
ಮಾಧುಸ್ವಾಮಿ, ಹೊರಟ್ಟಿಯಿಂದ ಕಾಂಗ್ರೆಸ್ ವರ್ತನೆಗೆ ಖಂಡನೆ
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಪರಿಷತ್ನಲ್ಲಿ ಕಾಂಗ್ರೆಸ್ ನಡಾವಳಿ ಬಗ್ಗೆ ದೂರು ನೀಡಿದ ಬಳಿಕ ಮಾಧುಸ್ವಾಮಿ ಮಾತನಾಡಿ, ಅವಿಶ್ವಾಸ ಮಂಡನೆ ಕೊಡ್ತಾರೆ ಅಂತಾ ಅಂದುಕೊಂಡಿದ್ದೆವು. ಚರ್ಚೆಗೆ ಅನುವು ಮಾಡಿಕೊಟ್ಟಿಲ್ಲ. ಏಕಾಏಕಿ ಕಾಂಗ್ರೆಸ್ ಸದಸ್ಯರು ಅನಾಗರಿಕ ವರ್ತನೆ ತೋರಿದ್ದಾರೆ. ಸಭಾಪತಿಯವರು ನಮ್ಮ ಮನವಿಯನ್ನು ತಿರಸ್ಕೃತ ಮಾಡಿದ್ದಾರೆ. ಕೆಟ್ಟ ವಾತಾವರಣ ಸೃಷ್ಟಿಸಿ ಪರಿಷತ್ತು ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ ಎಂದರು.
ರಾಜ್ಯಪಾಲರಿಗೆ ಮನವಿ
ಅವಿಶ್ವಾಸ ಚರ್ಚೆ ಮಾಡಿದರೆ ಸಭಾಪತಿ ಸ್ಥಾನ ಹೋಗುತ್ತೆ ಅಂತ ಈ ವರ್ತನೆ ತೋರಿದ್ದಾರೆ. ರಾಜ್ಯಪಾಲರು ಕಾನೂನಾತ್ಮಕ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಸವರಾಜ ಹೊರಟ್ಟಿ ಕೂಡ ಮಾಧುಸ್ವಾಮಿ ಹೇಳಿಕೆ ಸಮರ್ಥಿಸಿ ಜೆಡಿಎಸ್ ನಿಂದ ಕೂಡ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ ಎಂದು ತಿಳಿಸಿದರು.