ಬೆಂಗಳೂರು: ಈಗಾಗಲೇ ಬಿಡಿಎ ಅಕ್ರಮ ಸಕ್ರಮಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಅಕ್ರಮ ಸಕ್ರಮ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಕಚೇರಿಗೂ ಕಳಿಸಲಾಗಿದ್ದರೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ.
ಬಿಡಿಎ ಅಕ್ರಮ ಸಕ್ರಮಕ್ಕೆ ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಬಿಡಿಎ ಬಡಾವಣೆಗಳಲ್ಲಿನ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಬಿಡಿಎ ಕಾಯ್ದೆಯ 38 dಗೆ ತಿದ್ದುಪಡಿ ಮಾಡಲಾಗಿದೆ. ಆ ಮೂಲಕ ಬಡಾವಣೆಯಲ್ಲಿ 12 ವರ್ಷಗೂ ಮುನ್ನ ಕಟ್ಟಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ. ಬಿಡಿಎಯ 6,000 ಎಕರೆ ಜಾಗದಲ್ಲಿ ಸುಮಾರು 75,000 ಅನಧಿಕೃತ ಕಟ್ಟಡಗಳಿವೆ. ಅವುಗಳನ್ನು ಸಕ್ರಮಗೊಳಿಸಲಾಗುತ್ತದೆ.
ಅದರಂತೆ 20/30 ಕಟ್ಟಡದವರು ಮಾರ್ಗಸೂಚಿ ದರದ ಶೇ 10ರಷ್ಟು, 30/40 ನಿವೇಶನದಲ್ಲಿ ಕಟ್ಟಡ ಕಟ್ಟಿದವರು ಶೇ 20ರಷ್ಟು ಹಾಗೂ 40/60 ಮತ್ತು 50/80 ವಿಸ್ತೀರ್ಣದ ನಿವೇಶನದಲ್ಲಿ ಮನೆ ಕಟ್ಟಿದವರು ಮಾರ್ಗಸೂಚಿ ದರದ ಶೇ 40ರಷ್ಟು ದಂಡ ಕಟ್ಟಬೇಕಾಗಿದೆ. ಖಾಲಿ ನಿವೇಶನ ಹಾಗೂ 50/80 ವಿಸ್ತೀರ್ಣಕ್ಕಿಂತ ಮೇಲ್ಪಟ್ಟ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳ ಸಕ್ರಮ ಮಾಡಬಾರದು ಎಂದು ನಿರ್ಧರಿಸಲಾಗಿದೆ. ಆ ಮೂಲಕ 20/30 ಹಾಗೂ 30/40 ನಿವೇಶನದಲ್ಲಿರುವ 45,000 ಮತ್ತು 40/60 ನಿವೇಶನದಲ್ಲಿರುವ 25,000 ಮನೆ ಮಾಲೀಕರಿಗೆ ಲಾಭವಾಗಲಿದೆ.
ಇನ್ನೂ ಬೀಳದ ರಾಜ್ಯಪಾಲರ ಅಂಕಿತ:
ಮೇ 14ರಂದು ನಡೆದ ಸಂಪುಟ ಸಭೆಯಲ್ಲಿ ಬಿಡಿಎ ಅಕ್ರಮ ಸಕ್ರಮ ತಿದ್ದುಪಡಿ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಅಂದು ನಡೆದ ಸಂಪುಟ ಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶಕ್ಕೆ ಅನುಮೋದನೆ ನೀಡಲಾಗಿತ್ತು. ಈಗಾಗಲೇ ಈ ಎರಡೂ ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೆ, ಬಿಡಿಎ ಅಕ್ರಮ ಸಕ್ರಮ ಸುಗ್ರೀವಾಜ್ಞೆಗೆ ಮಾತ್ರ ಅಂಕಿತ ಬಿದ್ದಿಲ್ಲ.
ರಾಜ್ಯಪಾಲರ ಕಚೇರಿಗೆ ಕಳುಹಿಸಿ ಸುಮಾರು 10 ದಿನಗಳು ಕಳೆದಿವೆ. ಆದರೆ, ರಾಜ್ಯಪಾಲರಿಂದ ಇನ್ನೂ ಅಂಕಿತ ಬಿದ್ದಿಲ್ಲ. ಇದುವರೆಗೆ ಸುಗ್ರೀವಾಜ್ಞೆ ಸಂಬಂಧ ರಾಜ್ಯಪಾಲರ ಕಚೇರಿಯಿಂದ ಯಾವುದೇ ಸ್ಪಷ್ಟೀಕರಣ ಕೇಳಿಲ್ಲ. ಇನ್ನು ಎರಡು ಮೂರು ದಿನಗಳೊಳಗೆ ಅಂಕಿತ ಬೀಳುವ ಸಾಧ್ಯತೆ ಇದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಿತ ವಿಳಂಬಕ್ಕೆ ಕಾರಣ ಏನು?:
ಬಿಡಿಎ ಅಕ್ರಮ ಸಕ್ರಮ ಸುಗ್ರೀವಾಜ್ಞೆ ಸಂಬಂಧ ಸಾಕಷ್ಟು ಕಾನೂನು ವಿಘ್ನಗಳಿರುವ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳೂ ಅಭಿಪ್ರಾಯ ನೀಡಿದ್ದರು. ಈ ಸಂಬಂಧ ಸಚಿವ ಮಾಧುಸ್ವಾಮಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಮಧ್ಯೆ ವಾಕ್ಸಮರವೂ ನಡೆದಿತ್ತು. ಅಕ್ರಮ ಸಕ್ರಮ ಕಾನೂನಾತ್ಮಕವಾಗಿ ಸಿಂಧುವಾಗುವ ಬಗ್ಗೆ ಅನುಮಾನದ ಜೊತೆಗೆ ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ರಾಜ್ಯಪಾಲರು ಈ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸುಗ್ರೀವಾಜ್ಞೆ ಸಂಬಂಧ ಇರುವ ಕಾನೂನು ತೊಡಕುಗಳ ಬಗ್ಗೆ ಪರಿಶೀಲಿಸುತ್ತಿದ್ದು, ಹೀಗಾಗಿ ಸುಗ್ರೀವಾಜ್ಞೆ ಗೆ ಅಂಕಿತ ಹಾಕುವುದು ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.