ಬೆಂಗಳೂರು : ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ ಸೇರಿ ಮೂರು ವಿಧೇಯಕಗಳಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
ಎರಡು ಪರೀಕ್ಷಾ ಮಂಡಳಿ ವಿಲೀನ: ರಾಜ್ಯ ಸರ್ಕಾರ ಈ ಸಂಬಂಧ ರಾಜಪತ್ರ ಹೊರಡಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸುವ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಅನುಷ್ಠಾನಗೊಳಿಸಲಾಗಿದೆ. ಹೊಸ ಶಿಕ್ಷಣ ನೀತಿ ಅನ್ವಯ ಎರಡು ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ನಾಮಕಾರಣ ಮಾಡಲಾಗಿದೆ. ಮಂಡಳಿಗೆ ಓರ್ವ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುತ್ತಿದ್ದು, ಪರೀಕ್ಷೆ ವಿಷಯಗಳನ್ನು ಹೊಸದಾಗಿ ರಚನೆಯಾಗುವ ಮಂಡಳಿಯು ನೋಡಿಕೊಳ್ಳಲಿದೆ.
ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆ: ಗ್ರಾಮೀಣ ಜನಸಂಖ್ಯೆಯ ಆಧಾರದ ಮೇಲೆ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆ ಮಾಡುವ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಮೂಲಕ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ವಿಧೇಯಕ ಅಂಗೀಕಾರ ಮೂಲಕ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ಏಳು ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕನಿಷ್ಠ 20 ಮಂದಿ ಜಿಲ್ಲಾಪಂಚಾಯತ್ ಸದಸ್ಯರು ಇರಬೇಕು ಎಂಬ ನಿಯಮವನ್ನು 25 ಜಿಲ್ಲಾ ಪಂಚಾಯತ್ ಸದಸ್ಯರು ಎಂದು ತಿದ್ದುಪಡಿ ಮಾಡಲಾಗಿದೆ. 7 ರಿಂದ 9.5 ಲಕ್ಷ ಜನಸಂಖ್ಯೆಗೆ 28 ಜಿಲ್ಲಾಪಂಚಾಯತ್ ಸದಸ್ಯರು ಇರಬೇಕು. ಇನ್ನು 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಕನಿಷ್ಠ 12 ತಾಲೂಕು ಪಂಚಾಯತ್ ಸದಸ್ಯರು ಇರಬೇಕು ಎಂದು ಉಲ್ಲೇಖಿಸಲಾಗಿದೆ.
ಬಿಬಿಎಂಪಿ ವಾರ್ಡ್ ಮೀಸಲಾತಿ : ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.50 ಕ್ಕೆ ನಿಗದಿಗೊಳಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ವಾರ್ಡ್ ಮೀಸಲಾತಿಯಲ್ಲಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗದವರಿಗೆ ಶೇ. 50 ನಿಗದಿ ಮಾಡಲಾಗುತ್ತದೆ.
ಓದಿ: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?