ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ರಾಜ್ಯಪಾಲರು ದಿನಾಂಕ ನಿಗದಿಪಡಿಸಿದ್ದಾರೆ.
ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸಭಾಪತಿ ಹುದ್ದೆಗೆ ದಿನಾಂಕ ನಿಗದಿಪಡಿಸಿರುವ ರಾಜ್ಯಪಾಲ ವಜೂಭಾಯ್ ವಾಲಾ, ಸೋಮವಾರ ನಾಮಪತ್ರ ಸಲ್ಲಿಕೆ, ಮಂಗಳವಾರ ಚುನಾವಣೆ ಘೋಷಣೆ ಮಾಡಿದ್ದಾರೆ. ಇಂದು ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರಿಗೆ ದಿನಾಂಕ ನಿಗದಿ ಮಾಡುವಂತೆ ಶಿಫಾರಸು ಮಾಡಿದ್ದ ಸಂಪುಟ ಸಭೆ ನಿರ್ಧಾರಕ್ಕೆ ಮನ್ನಣೆ ಕೊಟ್ಟು ರಾಜ್ಯಪಾಲರು, ಒಂದೇ ದಿನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.
ಓದಿ:ರಾಜ್ಯದಲ್ಲಿ ಸರ್ಕಾರದ ಯಾವುದೇ ಗೋಶಾಲೆಗಳಿಲ್ಲ: ಸಚಿವ ಪ್ರಭು ಚವ್ಹಾಣ್
ಮಂಗಳವಾರ ಸಭಾಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಈಗಾಗಲೇ ಜೆಡಿಎಸ್ ಪಕ್ಷದಿಂದ ತಾವೇ ಸಭಾಪತಿ ಅಭ್ಯರ್ಥಿ ಎಂದು ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷ ಕೂಡ ಇವರನ್ನು ಬೆಂಬಲಿಸಲು ತೀರ್ಮಾನಿಸಿದ್ದು, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ. ಸಂಖ್ಯಾಬಲ ಕೊರತೆ ಇರುವುದರಿಂದ ಸಹಜವಾಗಿ ಕಾಂಗ್ರೆಸ್ ಪಕ್ಷ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಜುಗರಕ್ಕೀಡಾಗಲು ಬಯಸದೆ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ಸಭಾಪತಿ ಆಯ್ಕೆ ಅವಿರೋಧವಾಗಿ ಆಗುವ ನಿರೀಕ್ಷೆ ಹೆಚ್ಚಾಗಿದೆ.