ಬೆಂಗಳೂರು: ರಾಜ್ಯದ ಹಸಿರು ವಲಯ ಎಂದು ಗುರುತಿಸಿಕೊಂಡ ಜಿಲ್ಲೆಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಹಸಿರು ವಲಯದ ಜಿಲ್ಲೆಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ತೆರೆಯಯಲು ಕೆಲ ಷರತ್ತುಗಳ ಮೇಲೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ. ಶುಕ್ರವಾರದಿಂದ 11 ಜಿಲ್ಲೆಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ತೆರೆಯಲಿದೆ. ಏಕಾಏಕಿ ಜನ ಕಚೇರಿಗೆ ನುಗ್ಗುವಂತಿಲ್ಲ. ಒಬ್ಬೊಬ್ಬರಿಗೆ ಅರ್ಧ ಗಂಟೆ ಸಮಯ ನೀಡಲಾಗುತ್ತದೆ. ಕಚೇರಿಗೆ ಬರುವ ಮುನ್ನ ಕರೆ ಮಾಡಿ ಬರಬೇಕು. ಯಾವ ಸಮಯಕ್ಕೆ ಬರಬೇಕೆಂದು ಅಧಿಕಾರಿಗಳು ತಿಳಿಸುತ್ತಾರೆ. ಆ ಸಮಯಕ್ಕೆ ಬಂದು ಹೋಗಬೇಕು ಎಂದು ಅವರು ತಿಳಿಸಿದ್ದಾರೆ.
ಉಪ ನೋಂದಣಾಧಿಕಾರಿ ಕಚೇರಿಗೆ ಕಾರ್ಯನಿಮಿತ್ತ ಆಗಮಿಸುವವರು ಹಾಗೂ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸಹ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹಸಿರು ವಲಯ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳು ಬರುವ ಶುಕ್ರವಾರ ಕಚೇರಿಗೆ ಆಗಮಿಸುವಂತೆ ಅಶೋಕ್ ಸೂಚಿಸಿದ್ದಾರೆ. ಈ ಹಿನ್ನೆಲೆ ಸೋಮವಾರದಿಂದ ರಾಜ್ಯದ 9 ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯಾರಂಭ ಮಾಡುವುದು ಪಕ್ಕಾ ಆಗಿದೆ.