ಬೆಂಗಳೂರು: ವಿಧಾನಸಭೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದರ ಕುರಿತು ಚರ್ಚಿಸಲು ಅವಕಾಶ ಸಿಗದ ಹಿನ್ನೆಲೆ ಕಾಂಗ್ರೆಸ್ ನಾಯಕರು ಸಭಾತ್ಯಾಗ ನಡೆಸಿ ಆಚೆ ಬಂದಿದ್ದು, ಸದ್ಯ ಸರ್ಕಾರ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಮುಂದಾಗಿದೆ.
ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಸಚಿವ ಮಾಧುಸ್ವಾಮಿ ತೆರಳಿದ್ದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಕೊಠಡಿಯಲ್ಲಿ ಮಾಧುಸ್ವಾಮಿ ಮಾತುಕತೆ ನಡೆಸಿದ್ದು, ಮನವೊಲಿಸಿ ಸದನಕ್ಕೆ ವಾಪಸ್ ಬರುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ. ಸಭಾತ್ಯಾಗದ ಬಳಿಕ ಸಭೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ಮನವೊಲಿಸುವ ಯತ್ನವನ್ನು ಸರ್ಕಾರ ಮುಂದುವರಿಸಿದ್ದು, ಸಿದ್ದರಾಮಯ್ಯ ಜತೆ ಪಕ್ಷದ ಹಿರಿಯ ಶಾಸಕರೆಲ್ಲಾ ಭಾಗಿಯಾಗಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಸಚಿವ ಮಾಧುಸ್ವಾಮಿ ಮಾತನಾಡಿ, ನಾವೀಗ ಸಭಾಧ್ಯಕ್ಷರ ಕೊಠಡಿಗೆ ಬನ್ನಿ ಅಂತ ಹೇಳಿದ್ದೇನೆ. ಒಬ್ಬನೇ ಮಾತಾಡುವ ವಿಚಾರವಲ್ಲ, ಸ್ಪೀಕರ್ ಸೇರಿದಂತೆ ಎಲ್ಲರೂ ಇರಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ಪೀಕರ್ ಕಚೇರಿಗೆ ಬನ್ನಿ ಅಂತ ಹೇಳಿದ್ದೇನೆ. ಸ್ಪೀಕರ್ ಬಳಿ ಹೋಗಿ ಈ ವಿಚಾರ ತಿಳಿಸುವೆ ಎಂದರು.