ಬೆಂಗಳೂರು: ಕೊಡಗಿನ ಪುರಾತನ ಕೋಟೆ ಆವರಣದಲ್ಲಿರುವ ಅರಮನೆ ಹಾಗೂ ಸ್ಮಾರಕಗಳ ದುರಸ್ತಿಗೆ ಒಟ್ಟು 10.77 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಸಂಬಂಧ ಸ್ಥಳೀಯ ನಿವಾಸಿ ಜೆ. ಎಸ್.ವಿರೂಪಾಕ್ಷಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಲಾಗಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್ ಲಿಖಿತ ಮಾಹಿತಿ ಸಲ್ಲಿಸಿ, ಮಡಿಕೇರಿಯ ಪುರಾತನ ಅರಮನೆಯ ದುರಸ್ತಿ ಕಾರ್ಯದ ಡಿಪಿಆರ್ಗೆ ಜುಲೈ 24ರಂದು ಅನುಮೋದನೆ ನೀಡಲಾಗಿದೆ. ಒಟ್ಟು 10.77 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, 3-4 ದಿನಗಳಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು. ಬಳಿಕ ಜಿಲ್ಲಾಧಿಕಾರಿ ಹಣವನ್ನು ದುರಸ್ತಿ ಮಾಡುವ ಭಾರತೀಯ ಸರ್ವೇಕ್ಷಣಾ ಮತ್ತು ಪುರಾತತ್ವ ಇಲಾಖೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನು ದಾಖಲಿಸಿಕೊಂಡ ಪೀಠ, ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡಿದ ನಂತರದ ಮೂರು ವಾರದೊಳಗೆ ವಿಸ್ತ್ರುತ ಯೋಜನಾ ವರದಿಯನ್ನು ಭಾರತೀಯ ಸರ್ವೇಕ್ಷಣಾ ಮತ್ತು ಪುರಾತತ್ತ್ವ ಇಲಾಖೆ ಅನುಷ್ಠಾನ ಮಾಡಬೇಕು. ಆ ಇಲಾಖೆಯು ದುರಸ್ತಿ ಕಾರ್ಯದ ಒಟ್ಟು ಹಣಕ್ಕೆ ಶೇ.18ರಷ್ಟು ಸೇವಾ ಶುಲ್ಕ ವಿಧಿಸುವ ವಿಚಾರವನ್ನು ಮುಂದಿನ ವಿಚಾರಣೆ ವೇಳೆ ಪರಿಣಗಣಿಸಿ ವಾದ -ಪ್ರತಿವಾದ ಆಲಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಲಾಯಿತು.