ಬೆಂಗಳೂರು: ಕುಂಭದ್ರೋಣ ಮಳೆಯು ಉತ್ತರ ಕರ್ನಾಟಕ ಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಅನೇಕ ಜನರು ನಿರಾಶ್ರಿತರಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿನ ನಿರಾಶ್ರಿತರಿಗೆ ಪೌಷ್ಟಿಕ ಆಹಾರ ನೀಡುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಜೊತೆಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡಲು ನಿರ್ದೇಶನ ನೀಡಿದೆ.
ಅದೇ ರೀತಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವಂತೆ ತಿಳಿಸಿದೆ. ಒಂದು ವೇಳೆ ಅಲ್ಲಿನ ಸಂತ್ರಸ್ತರಿಗೆ ಅನಾರೋಗ್ಯ ಕಂಡು ಬಂದಲ್ಲಿ, ಕೂಡಲೇ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
ಇನ್ನು ಕೊರೊನಾ ಸೋಂಕು ಪತ್ತೆಯಾದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಕಡ್ಡಾಯವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಹಾಗೂ ಈ ಕ್ರಮಗಳಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ಕಾಳಜಿ ಕೇಂದ್ರಗಳಲ್ಲಿ ನೀಡಬೇಕಾದ ಪೌಷ್ಟಿಕ ಆಹಾರದ ವಿವರ
ಬೆಳಗಿನ ಉಪಾಹಾರ: ಅವಲಕ್ಕಿ ಒಗ್ಗರಣೆ, ಉಪ್ಪಿಟ್ಟು ಮತ್ತು ಶಿರಾ, ಚಿತ್ರಾನ್ನ, ಇಡ್ಲಿ/ದೋಸೆ/ಕಾಫಿ/ಟೀ/ಹಾಲು
ಮಧ್ಯಾಹ್ನ ಊಟ: ಜೋಳದ ರೊಟ್ಟಿ/ಚಪಾತಿ, ತರಕಾರಿ ಪಲ್ಯ/ಕಾಳು ಪಲ್ಯ, ಅನ್ನ ಸಾಂಬಾರ್, ಮೊಸರು ಮತ್ತು ಚಟ್ನಿ ಪುಡಿ, ಮೊಟ್ಟೆ ಮತ್ತು ಬಾಳೆಹಣ್ಣು
ಸಾಯಂಕಾಲ ತಿಂಡಿ: ಮಂಡಕ್ಕಿ, ಚುರುಮುರಿ ಮತ್ತು ಮಿರ್ಚಿ ಬಿಸ್ಕತ್ / ಬನ್, ಕಾಫಿ/ಟೀ/ಹಾಲು
ರಾತ್ರಿ ಊಟ: ಜೋಳದ ರೊಟ್ಟಿ/ಚಪಾತಿ, ತರಕಾರಿ ಪಲ್ಯ/ಕಾಳು ಪಲ್ಯ, ಅನ್ನ ಸಾಂಬಾರ್, ಮೊಸರು ಮತ್ತು ಚಟ್ನಿ ಪುಡಿ, ಮೊಟ್ಟೆ ಮತ್ತು ಬಾಳೆಹಣ್ಣು