'ಕರ್ಫ್ಯೂ ಅವಧಿಯಲ್ಲಿ ಗಾರ್ಮೆಂಟ್ಸ್ ನೌಕರರ ವೇತನ ಸರ್ಕಾರವೇ ಭರಿಸಬೇಕು'; ಹೆಚ್ಚಿದ ಒತ್ತಾಯ - Garments & Tex Tail Employees Association opposed the govt dicision
ಕರ್ಫ್ಯೂ ಅವಧಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರ ವೇತನವನ್ನು ಸರ್ಕಾರವೇ ಭರಿಸಿಕೊಡಬೇಕು. ಆ ಮೂಲಕ ಲಕ್ಷಾಂತರ ಮಹಿಳಾ ಕಾರ್ಮಿಕರ ಬದುಕು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಗಾರ್ಮೆಂಟ್ಸ್ ಹಾಗೂ ಟೆಕ್ಸ್ ಟೈಲ್ ನೌಕರರ ಸಂಘ ಒತ್ತಾಯಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ 14 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಿ ಕೆಲವು ನಿರ್ಬಂಧಗಳನ್ನು ಹೇರಿದೆ. ಆದರೆ, ಗಾರ್ಮೆಂಟ್ಸ್ವೊಂದನ್ನು ಹೊರತು ಪಡಿಸಿ ಎಲ್ಲ ಕೈಗಾರಿಕೆಗಳು ಕೆಲಸ ಮಾಡಬಹುದು ಎಂದು ಆದೇಶಿಸಿದೆ. ಇದೀಗ ಗಾರ್ಮೆಂಟ್ಸ್ ಹಾಗೂ ಟೆಕ್ಸ್ ಟೈಲ್ ನೌಕರರ ಸಂಘ ಸರ್ಕಾರದ ನಿಲುವನ್ನು ಪ್ರಶ್ನಿಸಿದೆ.
ಸರ್ಕಾರದ ಈ ನಿಲುವನ್ನ ಪ್ರಶ್ನಿಸಿದ ಸಂಘ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು (ಕೆಲ ಕಂಪನಿಗಳು ಈಗಾಗಲೇ ಪಾಲಿಸುತ್ತಿವೆ) ಸೂಕ್ತ ಅಂತರ ಕಾಯ್ದಕೊಂಡು ಕೆಲಸ ಮಾಡಿಸುವಂತೆ ಮಾಲೀಕರಿಗೆ ಆದೇಶ ನೀಡಿ, ಗಾರ್ಮೆಂಟ್ಸ್ ಉದ್ಯಮ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು. ಇಲ್ಲವಾದಲ್ಲಿ ಕರ್ಫ್ಯೂ ಅವಧಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರ ವೇತನವನ್ನು ಸರ್ಕಾರವೇ ಭರಿಸಿಕೊಡಬೇಕು. ಆ ಮೂಲಕ ಲಕ್ಷಾಂತರ ಮಹಿಳಾ ಕಾರ್ಮಿಕರ ಬದುಕು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದೆ.
ದುಡಿಯುವ ಮಹಿಳೆಯರಿಗೆ ಸಂಕಷ್ಟ: ಮಹಿಳೆಯರ ಆರ್ಥಿಕ ಪರಿಸ್ಥಿತಿ ಬಗ್ಗೆ ಗಾರ್ಮೆಂಟ್ಸ್ ಹಾಗೂ ಟೆಕ್ಸ್ ಟೈಲ್ ನೌಕರರ ಸಂಘ ಕಾನೂನು ಸಲಹೆಗಾರ ಮಾತನಾಡಿ, ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಬದುಕಿಗೆ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಅವರಲ್ಲಿ ಶೇ. 85 ಭಾಗ ಮಹಿಳೆಯರಾಗಿದ್ದು, ಅದರಲ್ಲೂ ಶೇ. 50 ಭಾಗ ತಮ್ಮ ಕುಟುಂಬದ ಜವಾಬ್ದಾರಿಯನ್ನು ಒಂಟಿಯಾಗಿ ನಿಭಾಯಿಸುತ್ತಿದ್ದಾರೆ ವಿವರಿಸಿದರು.
ಕಳೆದ ವರ್ಷ ಬಹುತೇಕ ಎರಡು ತಿಂಗಳ ಲಾಕ್‍ಡೌನ್ ಸಮಯದಲ್ಲಿ ಗಾಮೆಂಟ್ಸ್ ಕಾರ್ಮಿಕರು ತಮ್ಮ ಆದಾಯ, ಕೆಲಸ ಎರಡನ್ನೂ ಕಳೆದುಕೊಂಡಿದ್ದರು. ಆ ಹೊಡೆತದಿಂದಲೇ ಕಾರ್ಮಿಕರು ಇನ್ನೂ ಚೇತರಿಸಿಕೊಂಡಿಲ್ಲದಿರುವಾಗ, ಈಗ ಇದ್ದಕ್ಕಿದ್ದಂತೆ ಕೇವಲ ಗಾರ್ಮೆಂಟ್ಸ್ಗಳು ಮಾತ್ರ ಬಾಗಿಲು ಮುಚ್ಚಬೇಕೆಂದು ಆದೇಶ ಹೊರಡಿಸಿರುವುದು ಮಹಿಳಾ ಕಾರ್ಮಿಕರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ: ಗಾರ್ಮೆಂಟ್ಸ್ ಕಾರ್ಮಿಕರು ದೇಶದ, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅವರಿಗೆ ದೊರಕುತ್ತಿರುವ ಕನಿಷ್ಠ ವೇತನ ಇಂದಿಗೂ ರೂ. 9000 ವನ್ನು ದಾಟಿಲ್ಲ. ಕರ್ನಾಟಕದ 5 ಲಕ್ಷ ಗಾರ್ಮೆಂಟ್ ಕಾರ್ಮಿಕರ ಪ್ರತಿ ತಿಂಗಳ ವೇತನವು ಸರಾಸರಿ ರೂ. 500 ಕೋಟಿಗೂ ಹೆಚ್ಚಿದ್ದು, ಅಷ್ಟೂ ಹಣ ಪುನಃ ಮಾರುಕಟ್ಟೆಯಲ್ಲಿ ಖರ್ಚಾಗುತ್ತಿದೆ ಮತ್ತು ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆದರೆ, ಕಳೆದ 40 ವರ್ಷಗಳ ಗಾರ್ಮೆಂಟ್ಸ್ ಉದ್ಯಮದ ಇತಿಹಾಸದಲ್ಲಿ ಇಲ್ಲಿಯವರೆಗೂ ಸರ್ಕಾರ ತನ್ನ ಯಾವುದೇ ಕಾರ್ಯನೀತಿಗಳಲ್ಲಿ ಗಾರ್ಮೆಂಟ್ಸ್ ಕಾರ್ಮಿಕರನ್ನು ಪರಿಗಣಿಸಿರುವುದಿಲ್ಲ ಎಂದು ಹೇಳಿದ ಅವರು, ಸದ್ಯಕ್ಕೆ ಸಂಘ ಮುಖ್ಯಮಂತ್ರಿಗೆ ಬೇಡಿಕೆಯ ಪತ್ರ ಬರೆದಿದ್ದು, ಲಕ್ಷಾಂತರ ಕುಟುಂಬದ ಆರ್ಥಿಕ ಪರಿಸ್ಥಿತಿ ತಲೆಕೆಳಗೆ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಓದಿ: ರೆಮ್ಡಿಸಿವಿರ್, ಆ್ಯಕ್ಸಿಜನ್ ಕೊರತೆ ತೀವ್ರವಾಗಿದೆ : ಹೈಕೋರ್ಟ್ಗೆ ಖಾಸಗಿ ಆಸ್ಪತ್ರೆಗಳ ಸಂಘದ ಮಾಹಿತಿ