ಬೆಂಗಳೂರು: ಕೊರೊನಾ ಒಂದನೇ ಅಲೆಯಿಂದ ತತ್ತರಿಸಿರುವ ರಾಜ್ಯ ಸರ್ಕಾರಕ್ಕೆ ಇದೀಗ ಕೊರೊನಾ ಸೋಂಕಿನ ಎರಡನೇ ಅಲೆ ಅಪ್ಪಳಿಸಿದೆ.
ಕೋವಿಡ್ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಚಿಂತನೆ ನಡೆಸಿದ್ದು, ಕಬ್ಬಿಣದ ಅದಿರು ರಫ್ತು ಮಾಡುವ ಮೂಲಕ ರಾಜ್ಯದ ಆದಾಯ ಹೆಚ್ಚಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಕಬ್ಬಿಣ ಅದಿರು ರಫ್ತು ಪುನಃ ಆರಂಭಿಸುವ ಕುರಿತು ಒಲವು ತೋರಿಸಿರುವ ಸರ್ಕಾರ, ಚರ್ಚೆಯಲ್ಲಿ ತೊಡಗಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಸದ್ದು ಮಾಡಿದ ನಂತರ ಎಂಟು ವರ್ಷದ ಹಿಂದೆ ಸುಪ್ರೀಂಕೋರ್ಟ್ ಸೂಚನೆಯಂತೆ ವಿದೇಶಗಳಿಗೆ ಕಬ್ಬಿಣ ಅದಿರು ರಫ್ತು ನಿಷೇಧ ಮಾಡಲಾಗಿತ್ತು. ಕೇವಲ ಸ್ಥಳೀಯ ಬಳಕೆಗೆ ಇ-ಹರಾಜಿನ ಮೂಲಕ ಕಬ್ಬಿಣ ಅದಿರು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ಆದಾಯ ನಷ್ಟವಾಗಿದೆ.
ಇದೀಗ ಬೇರೆ ಬೇರೆ ಆದಾಯದ ಮೂಲಗಳ ಪತ್ತೆಗೆ ಮುಂದಾಗಿರುವ ಸರ್ಕಾರ, ಕಬ್ಬಿಣ ಅದಿರನ್ನು ವಿದೇಶಕ್ಕೆ ರಫ್ತು ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದು, ಈಗಾಗಲೇ ಚರ್ಚೆ ಸಹ ನಡೆಸಲಾಗಿದೆ. ರಫ್ತಿಗೆ ಈಗ ಇರುವ ತಡೆ ತೆರವುಗೊಳಿಸುವಂತೆ ಸುಪ್ರೀಕೋರ್ಟ್‌ಗೆ ಮೊರೆ ಹೋಗಲು ಸರ್ಕಾರ ಅಲೋಚಿಸುತ್ತಿದೆ.
ಆದಾಯದ ನಿರೀಕ್ಷೆ ಎಷ್ಟು?:
ಕಬ್ಬಿಣ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದರೆ ವರ್ಷಕ್ಕೆ ಅಂದಾಜು 8 ಸಾವಿರ ಕೋಟಿ ರೂ.ಗಳ ಆದಾಯ ಬರಬಹುದೆಂದು ಸರ್ಕಾರ ಅಂದಾಜು ಮಾಡಿದೆ. ಈಗ ಆದಾಯ ಸುಮಾರು 2000 ಕೋಟಿ ರೂ. ಮಾತ್ರ ಬರುತ್ತಿದೆ. ರಪ್ತಿಗೆ ಅನುಮತಿ ದೊರೆತರೆ ಮೂರ್ನಾಲ್ಕು ಪಟ್ಟು ಹೆಚ್ಚು ಆದಾಯದ ನಿರೀಕ್ಷೆ ಮಾಡಬಹುದೆಂದು ಉನ್ನತ ಮೂಲಗಳು ತಿಳಿಸಿವೆ.ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ಮಾತ್ರ ರಫ್ತು ನಿಷೇಧ ಮಾಡಿತ್ತು. ಆದರೆ, ಒಡಿಶಾ, ಛತ್ತೀಸ್‌ಗಢ ರಾಜ್ಯಗಳಲ್ಲಿ ರಫ್ತು ನಿಷೇಧ ಇಲ್ಲ. ಆ ರಾಜ್ಯಗಳಿಗೆ ಉತ್ತಮ ಆದಾಯ ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಸಹ ರಪ್ತಿನ ಬಗ್ಗೆ ಆಸಕ್ತಿ ತೋರಿಸಿದೆ.
ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ :
ಕಬ್ಬಿಣ ಅದಿರುಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅದಿರು ರಫ್ತಿಗೆ ಸುಪ್ರೀಂಕೋರ್ಟ್ ಅನುಮತಿ ಬೇಕೇ ಬೇಕು. ಹಾಗಾಗಿ, ಉಪ ಚುನಾವಣೆ ಮುಗಿದ ನಂತರ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಈಗಾಗಲೇ ಗಣಿ ಇಲಾಖೆ ಹಾಗೂ ಸಂಭಂದಿಸಿದ ಸಚಿವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಿದ ನಂತರ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಇಸಿ ಉಸ್ತುವಾರಿಯಲ್ಲಿ ಅದಿರು ರಫ್ತು ಮಾಡುವ ಉದ್ದೇಶ ಸರ್ಕಾರ ಹೊಂದಿದ್ದು, ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿರುವ ಕಾರಣಕ್ಕೆ ರಾಜ್ಯದಲ್ಲಿ ಈಗ ಕಬ್ಬಿಣ ಅದಿರಿಗೆ ಬೇಡಿಕೆಯೇ ಇಲ್ಲದಂತಾಗಿದೆ.
ರಾಜ್ಯದಲ್ಲಿ 2020-21 ನೇ ಸಾಲಿನಲ್ಲಿ ಅದಿರು 36.66 ಮೆಟ್ರಿಕ್ ಟನ್ ಉತ್ಪಾದನೆಯಾದರೆ ಬೇಡಿಕೆ 32.62 ಮೆಟ್ರಿಕ್ ಟನ್‌ಗೆ ಮಾತ್ರ ಬಂದಿತ್ತು. ಸ್ಥಳೀಯ ಉಕ್ಕು ಕಾರ್ಖಾನೆಗಳು ಮಾತ್ರ ಅದಿರು ಪಡೆಯುತ್ತಿವೆ. 10 ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು 29 ಸಾವಿರ ಕೋಟಿ ರೂ. ಆದಾಯ ಬಂದಿದೆ. ರಫ್ತು ಇದ್ದಿದ್ದರೆ ನಾಲ್ಕು ಪಟ್ಟು ಹೆಚ್ಚಾಗುತ್ತಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಿರು ಪ್ರತಿ ಟನ್‌ಗೆ 150-160 ರೂ.ಗಳಿದ್ದರೆ, ಸ್ಥಳೀಯ ಮಾರುಕಟ್ಟೆಯಲ್ಲಿ 40 ರಿಂದ 50 ರೂ.ಗಳು ಇದೆ.
ಗಣಿ ಅದಾಲತ್ :
ಗಣಿಗಾರಿಕೆ ನಡೆಸುವವರ ಸಮಸ್ಯೆ ಬಗೆಹರಿಸುವ ಸಲುವಾಗಿ ಗಣಿ ಅದಾಲತ್ ಈ ತಿಂಗಳಿಂದ ಆರಂಭವಾಗುತ್ತಿದೆ. ಮೊದಲ ಅದಾಲತ್ ಏಪ್ರಿಲ್ 30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಗಣಿಗಾರಿಕೆ ನಡೆಸುವವರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದಾಗಿದೆ. ಗಣಿಗಳ ಮಾಲೀಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕರೆ, ಸಾರ್ವಜನಿಕರು ಗಣಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತರಲು ವೇದಿಕೆಯಾಗುತ್ತದೆ.
ಈ ಹಿಂದೆ ಕಬ್ಬಿಣ ಅದಿರು ಗಣಿಗಾರಿಕೆ ನಡೆದಿರುವ ಬಳ್ಳಾರಿ, ಚಿತ್ರದುರ್ಗ, ತುಮಕೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಪ್ರಕೃತಿ ಹಾಗೂ ಪರಿಸರದ ಮೇಲಾಗಿರುವ ಹಾನಿಯಿಂದಾಗಿ ಪುನರ್ ನಿರ್ಮಾಣ ಮತ್ತು ಪುನರ್ವಸತಿ ಸರಿಯಾಗಿ ಆಗಿಲ್ಲ. ಇದರಿಂದಾಗಿ ಕೋಟ್ಯಂತರ ರೂ. ಹಾಗೆಯೇ ಆದ್ದರಿಂದ ಮತ್ತೆ ಗಣಿಗಾರಿಕೆ ಆರಂಭವಾದರೆ ಮತ್ತಷ್ಟು ಹಾನಿಯಾಗುತ್ತದೆ ಎಂದು ಪರಿಸರವಾದಿಗಳ ವಿರೋಧ ಎದುರಾಗಬಹುದೆಂದು ಸರ್ಕಾರ ನಿರೀಕ್ಷೆ ಮಾಡಿದೆ. ಆದರೂ ಆದಾಯದ ದೃಷ್ಟಿಯಿಂದ ಮುಂದಿನ ಹೆಜ್ಜೆ ಇಡಲು ಮುಂದಾಗಿದೆ.