ಬೆಂಗಳೂರು : ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಮೂರು ಸಮಿತಿಗಳ ರಚನೆಗೆ ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಲಸಿಕೆ ವಿತರಣೆ ಪೂರ್ವ ಸಿದ್ಧತೆ, ಕೋವಿಡ್ ಸ್ಥಿತಿಗತಿ ಸಂಬಂಧ ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆ ಬಳಿಕ ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿ ಮಟ್ಟದ ಸಮಿತಿಗಳ ರಚನೆಗೆ ನಿರ್ಧರಿಸಲಾಗಿದೆ. ಲಸಿಕೆ ಹಂಚಿಕೆಗೆ ಬೂತ್ಗಳ ರಚನೆ ಮಾಡಲಾಗುತ್ತದೆ. ಚುನಾವಣಾ ಬೂತ್ಗಳ ಮಾದರಿಯಲ್ಲಿ ವಿತರಣಾ ಕೇಂದ್ರಗಳ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ವಿತರಣೆ ಬಗ್ಗೆ ಪ್ರಧಾನಿ ಜೊತೆ ಚರ್ಚಿಸಲಾಗಿದೆ. ಹೆಚ್ಚು ಕೋವಿಡ್ ಪ್ರಕರಣಗಳಿರುವ ಮತ್ತು ಕಡಿಮೆ ಪ್ರಕರಣಗಳಿರುವ ರಾಜ್ಯಗಳ ಜೊತೆ ಸಭೆ ನಡೆಸಲಾಗಿದೆ. ನೀತಿ ಆಯೋಗದ ಸದಸ್ಯರು ಡಾ.ವಿ.ಕೆ.ಪೌಲ್ ಲಸಿಕೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯಾವ್ಯಾವ ದೇಶಗಳಲ್ಲಿ ಯಾವ ರೀತಿ ಲಸಿಕೆ ತಯಾರಿಸಲಾಗುತ್ತದೆ ಎಂಬುವುದರ ಕುರಿತು ಮಾಹಿತಿ ನೀಡಿದ್ದಾರೆ.
ಜಗತ್ತಿನಾದ್ಯಂತ ಹಲವೆಡೆ ಲಸಿಕೆ ತಯಾರಾಗ್ತಿವೆ, 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಗಳ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್ನಲ್ಲಿವೆ. ಭಾರತದಲ್ಲಿ 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದರು.
ದೇಶದಲ್ಲಿ ಆರಂಭದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡುವ ಉದ್ದೇಶವಿದೆ. ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ಹಾಕಲಾಗುವುದು. 26 ಕೋಟಿ 50 ರಿಂದ 60 ವಯೋಮಿತಿಯವರಿಗೆ ಲಸಿಕೆ ಕೊಡುವ ಉದ್ದೇಶವಿದೆ ಎಂದು ವಿವರಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ 29,451 ಕೇಂದ್ರಗಳ ಗುರುತು: ಕೆ. ಸುಧಾಕರ್
ಸಭೆಯಲ್ಲಿ ಪ್ರಧಾನಿ ಹೇಳಿದ್ದೇನು?: ಲಸಿಕೆ ಬರುವವರೆಗೂ ಸೋಂಕು ನಿಯಂತ್ರಣದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಲಸಿಕೆ ವಿತರಣೆಯ ಪೂರ್ವ ಸಿದ್ಧತೆ, ಕೋವಿಡ್ ಸ್ಥಿತಿಗತಿ ಸಂಬಂಧ ಸಿಎಂ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಎಲ್ಲಾ ರಾಜ್ಯಗಳು ಸರ್ವ ಸನ್ನದ್ಧವಾಗಿರಬೇಕು, ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ.
ವಿಜ್ಞಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಲಸಿಕೆ ಬರಬಹುದು. ಲಸಿಕೆ ವಿತರಣೆಗೆ ನೀವು ಯಾವ ರೀತಿ ತಯಾರಿ ಮಾಡಿಕೊಂಡಿದ್ದೀರಿ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ಕೇಂದ್ರಕ್ಕೆ ಕಳಿಸಿಕೊಡಿ ಎಂದು ಸೂಚಿಸಿದರು.
ಲಸಿಕೆ ವಿತರಣೆಗೆ ಸಾಮಾನ್ಯ ಅಗತ್ಯ ತಯಾರಿ ಮಾಡಿಕೊಳ್ಳೋಣ. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆಗೆ ಕೆಲವು ನಿಯಮ ರೂಪಿಸಿದೆ. ಅದರ ಪ್ರಕಾರ ತಯಾರಿಗಳನ್ನು ಮಾಡಿಕೊಳ್ಳಿ. ಲಸಿಕೆ ವಿತರಣೆ ಅತಿ ದೊಡ್ಡ ಪ್ರಕ್ರಿಯೆಯಾಗಿರುತ್ತದೆ, ಚುನಾವಣೆ ಮಾದರಿ ಸಜ್ಜಾಗಬೇಕು.
ಕೊರೊನಾ ಸಾವಿನ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸಲು ಗಮನ ನೀಡಿ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಮಾಡಲು ಆದ್ಯತೆ ನೀಡಿ. ಲಸಿಕೆ ಬರುತ್ತದೆ ಎಂಬ ಕಾರಣಕ್ಕೆ ಕೊರೊನಾ ನಿರ್ವಹಣೆ ನಿರ್ಲಕ್ಷ್ಯ ಬೇಡ ಎಂದರು.