ಬೆಂಗಳೂರು: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪಡೆಯುವ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕದ ದರವನ್ನು ಕಡಿಮೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅದರಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಪಡೆಯುವ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕವನ್ನು ತಕ್ಷಣ ಜಾರಿಗೆ ಬರುವಂತೆ ಅಧಿಸೂಚಿತ ಕೃಷಿ ಉತ್ನನ್ನಗಳಿಗೆ ಶೇ.1ಕ್ಕೆ ನಿಗದಿ ಪಡಿಸಿ, ಒಣ ದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸುವಂತೆ ಆದೇಶಿಸಿದೆ.
![APMC market fees, APMC market fees reduce, APMC market fees reduce news, ಎಪಿಎಂಸಿ ಮಾರುಕಟ್ಟೆ ಶುಲ್ಕ, ಎಪಿಎಂಸಿ ಮಾರುಕಟ್ಟೆ ಶುಲ್ಕ ಕಡಿತ, ಎಪಿಎಂಸಿ ಮಾರುಕಟ್ಟೆ ಶುಲ್ಕ ಕಡಿತ ಸುದ್ದಿ,](https://etvbharatimages.akamaized.net/etvbharat/prod-images/kn-bng-03-apmc-marketfeereduce-script-7201951_21072020233747_2107f_1595354867_1013.jpg)
ಪ್ರಸ್ತುತ ರಾಜ್ಯದಲ್ಲಿ ಏಕರೂಪ ಮಾರುಕಟ್ಟೆ ಶುಲ್ಕ ಆಕರಣೆ ಪದ್ಧತಿ ಜಾರಿಯಲ್ಲಿದೆ. ಸದ್ಯ ಹಣ್ಣು, ತರಕಾರಿ ಮತ್ತು ಹೂವು ಉತ್ಪನ್ನಗಳಿಗೆ ಶೇ.1ರಂತೆ ಬಳಕೆದಾರರ ಶುಲ್ಕ, ಒಣ ದ್ರಾಕ್ಷಿ ಮೇಲೆ ಶೇ.0.10ರಂತೆ ಹಾಗೂ ಆಹಾರ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಕಾಳುಗಳು, ಹತ್ತಿ, ಸಾಂಬಾರ್ ಪದಾರ್ಥಗಳು ಮತ್ತು ತೋಟಗಾರಿಕೆ ಉತ್ಪನ್ನಗಳ ಮೇಲೆ ಶೇ.1.5ರಂತೆ ಮಾರುಕಟ್ಟೆ ಶುಲ್ಕವನ್ನು ವಿಧಿಸಲಾಗುತ್ತಿದೆ. ಹೀಗಾಗಿ ಪ್ರಸ್ತುತ ಶೇ.1 ಮತ್ತು ಶೇ.1.5ರಂತೆ ವಿಧಿಸುತ್ತಿರುವ ಶುಲ್ಕವನ್ನು ಶೇ.0.50ಗೆ ಕಡಿಮೆಗೊಳಿಸುವ ಹಾಗೂ ಒಣ ದ್ರಾಕ್ಷಿ ಉತ್ಪನ್ನಕ್ಕೆ ಹಾಲಿ ಇರುವ ಶೇ.0.10 ಪೈಸೆಯನ್ನು ಮುಂದುವರೆಸುವ ಬಗ್ಗೆ ಆದೇಶ ಹೊರಡಿಸುವಂತೆ ಸರ್ಕಾರದ ಮುಂದೆ ಕೋರಿಕೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾಪವನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕವನ್ನು ಮಾರ್ಪಡಿಸಿ ಎಲ್ಲ ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಶೇ.1ಕ್ಕೆ ನಿಗದಿಪಡಿಸಲು ಹಾಗೂ ಒಣ ದ್ರಾಕ್ಷಿ ಉತ್ಪನ್ನಗಳಿಗೆ ಹಾಲಿ ಇರುವ ಶೇ.0.10 ನ್ನು ಮುಂದುವರೆಸಲು ನಿರ್ಧರಿಸಿದೆ.