ಬೆಂಗಳೂರು: ಬಡವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ಕಾಯಿಲೆ ಸರ್ಕಾರ ಕೊಟ್ಟಿದ್ದು. ಹಳ್ಳಿಗಳಲ್ಲೂ ಕೊರೊನಾ ಬರಲು ಸರ್ಕಾರ ಕಾರಣ. ಹಳ್ಳಿಗಳಲ್ಲಿ ಕೃಷಿ ಮಾಡ್ತಿದ್ದವರಿಗೂ ಕೊರೊನಾ ಬಂದಿದೆ. ಬೆಳಿಗ್ಗೆ ನನ್ನ ಆತ್ಮೀಯರೋರ್ವರು ಸಾವೀಗಿಡಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡ್ತಿದ್ದವರು ಸಾಯುತ್ತಿದ್ದಾರೆ. ಕೊರೊನಾದಿಂದ ಮುಕ್ತರಾದ ಬಳಿಕವೂ ಸಾವು ಆಗ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಸಿಎಂ ಮತ್ತು ಪಿಎಂಗೆ ಪತ್ರ ಬರೆಯುತ್ತೇನೆ. ಕೊರೊನಾ ಬಂದು ಹೋದ ಬಳಿಕ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್‌ನಿಂದ ಪಂಚ ಪರಿಹಾರ ಕಾರ್ಯಕ್ರಮ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ಕೊಡ್ತೇವೆ. ದೇಶದಲ್ಲಿ ಗೊಬ್ಬರದ ಬೆಲೆ ಗಗನಕ್ಕೇರುತ್ತಿದೆ. ಸದಾನಂದ ಗೌಡರಿಗೆ ಮನವಿ ಮಾಡುತ್ತೇನೆ. ಗೊಬ್ಬರ ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹೂ ಮಾರಾಟಗಾರರು ಮತ್ತು ಉತ್ಪಾದಕರಿಗೆ ಪರಿಹಾರ ಕೊಡಿ ಎಂದು ಕೇಳುತ್ತೇನೆ ಎಂದರು.
ಪಿಎಂ ಅವರು ಡಿಸಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ. ಆದ್ರೆ ಅಲ್ಲಿ ಮಿನಿಸ್ಟರ್ ಇದ್ದಾರೆ. ಇವರು ಪ್ರಚಾರಕ್ಕೆ ಕೆಲಸ ಮಾಡ್ತಿದ್ದಾರೆ. ಯಾರೂ ಕೂಡ ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಕಳೆದ ವರ್ಷದ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ನೇಯ್ಗೆ, ಮಡಿವಾಳ ಸೇರಿದಂತೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಎಂದು ಹಲವು ಬಾರಿ ಹೇಳಿದ್ದೆವು. ಆದ್ರೆ ಬಿಡುಗಡೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಮಾಡುವುದಕ್ಕೆ ಸ್ಥಳೀಯರ ವಿರೋಧ
ಇವರು ಕೊರೊನಾ ಹೆಸರಿನಲ್ಲಿ ಕಮಿಷನ್ ಹೊಡೆಯೋ ಸರ್ಕಸ್ ಮಾಡ್ತಿದ್ದಾರೆ. ಗ್ಲೋಬಲ್ ಟೆಂಡರ್ ಕರೆದಿದ್ದಾರೆ. ಬರೀ ಟೆಂಡರ್ ಕಮಿಷನ್ ಕೆಲಸ ಅಷ್ಟೇ. ಟೆಂಡರ್ ಎಲ್ಲ ಬರುವುದು ಕೇಂದ್ರ ಸರ್ಕಾರದ ಅಡಿಯಲ್ಲಿ. ರಾಂಚಿ ಮತ್ತು ಉತ್ತರ ಪ್ರದೇಶದಿಂದ ಬೆಂಗಳೂರು ಆಸ್ಪತ್ರೆಗೆ ಬರ್ತಿದ್ದಾರೆ. ಇಂತಹ ವ್ಯವಸ್ಥೆ ನಮ್ಮ ಸರ್ಕಾರ ಬಳಸಿಕೊಳ್ತಿಲ್ಲ ಅನ್ನೋದೇ ಬೇಸರ ಎಂದರು.
ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಲ್ಲದೇ ಪಿಎಂ ಅವರು ಡಿಸಿಗಳ ಜತೆ ಸಭೆ ಮಾಡ್ತಿದ್ದಾರೆ. ಸರ್ಕಾರದ ಮೇಲೆ ಪಿಎಂಗೆ ನಂಬಿಕೆಯಿಲ್ಲ ಎಂದರು.