ಬೆಂಗಳೂರು: ಕೊರೊನಾ ವಿಚಾರವಾಗಿ ಸರ್ಕಾರ ಎಲ್ಲೂ ಎಚ್ಚರ ತಪ್ಪಿಲ್ಲ. ಕೆಲವು ಅಂಶಗಳು ನಮ್ಮ ಕೈ ಮೀರಿ ನಡೆದಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ವಿಸ್ತಾರವಾಗಿ ಉತ್ತರ ನೀಡಿದ ಅವರು, ಅಂತರ ರಾಜ್ಯ ಗಡಿ ತೆರೆದಿರುವುದು, ಅಂತಾರಾಷ್ಟ್ರೀಯ ವಿಮಾನ ಹಾರಾಟ, ಡೊಮೆಸ್ಟಿಕ್ ವಿಮಾನಹಾರಾಟ ಸೇರಿದಂತೆ ಕೆಲ ಅಂಶಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದರಿಂದ ಕೆಲವು ಘಟನೆಗಳು ನಮ್ಮ ಕೈ ಮೀರಿ ನಡೆದಿವೆ ಎಂದರು.
ಅಂತಃಕರಣದಿಂದ ನಾನು ಮಾತನಾಡುತ್ತಿದ್ದೇನೆ. ಕೊರೊನಾ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದರ ಆಗು ಹೋಗು ಎಲ್ಲವೂ ನಮಗೆ ಗೊತ್ತಿದೆ. ನಾವು ಹುಡುಕಾಟ ಮಾಡುತ್ತಿಲ್ಲ. ಸಿಎಂ ಮಧ್ಯರಾತ್ರಿ ಕರೆ ಮಾಡಿ ಈ ವಿಚಾರವಾಗಿ ಕರೆಸುತ್ತಾರೆ. ಪ್ರತಿದಿನದ ಅಂಕಿ- ಅಂಶ ನಮ್ಮಲ್ಲಿ ಇದೆ. ಇಟಲಿ ಮಾಡಿದ ತಪ್ಪನ್ನು ನಾವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಟ್ರೇಸ್, ಟೆಸ್ಟ್ ಮತ್ತು ಟ್ರೀಟ್ ಆಧಾರದಲ್ಲಿ ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಮಾಡುತ್ತಿದ್ದೇವೆ. ಕಳೆದ ಮೂರು ದಿನದಲ್ಲಿ ನಾವು 3,116 ಮಂದಿಯನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ಜನವರಿ 21 ರಿಂದ ಇಲ್ಲಿವರೆಗೆ 1,22,532 ಮಂದಿ ವಿದೇಶದಿಂದ ಬಂದಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಹಲವರು ಇನ್ನೂ ವಿದೇಶದಲ್ಲಿ ಸಿಲುಕಿದ್ದಾರೆ. ಸದನದ ಅನೇಕ ಸದಸ್ಯರ ಮಕ್ಕಳು ವಿದೇಶದಲ್ಲಿ ಇದ್ದಾರೆ. ನೂರಕ್ಕೆ ನೂರು ಶೇಕಡಾ ಕ್ವಾರೆಂಟೈನ್ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಅಷ್ಟು ಜನರನ್ನು ನಾವು ಕ್ವಾರೆಂಟೈನ್ ಮಾಡಿ ಎಲ್ಲಿ ಇಡುವುದು. ವಿದೇಶದಿಂದ ಹಲವರು ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಅವರೆಲ್ಲರ ಕ್ವಾರೆಂಟೈನ್ ಗಾಗಿ ಅಷ್ಟು ದೊಡ್ಡ ವ್ಯವಸ್ಥೆ ಮಾಡುವುದು ಅಸಾಧ್ಯ ಎಂದು ತಿಳಿಸಿದರು.
ನಾಲ್ಕನೇ ವಾರದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33 ಕ್ಕೆ ಬಂದಿದೆ. ಇಟಲಿಯಲ್ಲಿ ಅದು ಆರು ಸಾವಿರ ಆಗಿತ್ತು. 33 ಸೋಂಕಿತರ ಪೈಕಿ 27 ಜನ ವಿದೇಶದಿಂದ ಬಂದಿದ್ದಾರೆ. ಇನ್ನು ಆರು ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಒಟ್ಟು ಐದು ಜನ ಗುಣಮುಖರಾಗಿದ್ದಾರೆ ಎಂದು ವಿವರಿಸಿದರು.
ಭಾರತದಲ್ಲಿ ಒಟ್ಟು 51 ಲ್ಯಾಬ್ಸ್ ಇದೆ. ನಮ್ಮ ರಾಜ್ಯದಲ್ಲಿ ಏಳು ಲ್ಯಾಬ್ಸ್ ಇದೆ. ಮಹಾರಾಷ್ಟ್ರ ಸೇರಿದಂತೆ ದೊಡ್ಡ ರಾಜ್ಯಗಳಲ್ಲಿ ಒಂದು ಅಥವಾ ಎರಡು ಲ್ಯಾಬ್ಸ್ ಗಳಷ್ಟೇ ಇವೆ ಎಂದು ಇದೇ ವೇಳೆ ತಿಳಿಸಿದರು.
ಐಐಎಸ್ಸಿ ಈಗ ಹೊಸ ಟೆಸ್ಟಿಂಗ್ ಮಾದರಿ ಪತ್ತೆ ಹಚ್ಚಿದ್ದು, ಅದನ್ನು ಬಳಕೆ ಮಾಡಲಾಗುತ್ತದೆ. ಸರ್ಕಾರದಿಂದ ಕೊರೊನಾ ವಿಚಾರವಾಗಿ ಯಾವುದೇ ಮಾನವ ಲೋಪ ಆಗಿಲ್ಲ. 1,477 ಜನರ ಗಂಟಲು ದ್ರವವನ್ನು ಟೆಸ್ಟ್ ಮಾಡಿದ್ದೇವೆ. ಖಾಸಗಿಯವರ ಜೊತೆ ಸೇರಿ ಇನ್ನೂ ಹೆಚ್ಚು ಟೆಸ್ಟ್ ಮಾಡುತ್ತೇವೆ. ಪಾಸಿಟಿವ್ ಆಗಿರುವ ಎಲ್ಲ ರೋಗಿಗಳನ್ನು ನಮ್ಮ ಆಸ್ಪತ್ರೆಯಲ್ಲಿ ಇಡಲಾಗಿದೆ. ಹೆಚ್ಚು ಜನ ರೋಗಿಗಳಾದರೆ ಕೊರಿಯಾ ತರ ಹೋಟೆಲ್ ಗಳಲ್ಲಿ ಅವರನ್ನು ಇಡಬಹುದು ಎಂದರು.
ಸಾಮಾಜಿಕ ಭದ್ರತೆ ಸೇರಿದಂತೆ ಕೊರೊನಾ ಬಗ್ಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸಿಎಂ ನಾಳೆ ಸದನದಲ್ಲಿ ಘೋಷಣೆ ಮಾಡುತ್ತಾರೆ. ದೇಶದಲ್ಲಿ ಸರ್ಕಾರಿ ಆಸ್ಪತ್ರೆಯನ್ನು 2000 ಬೆಡ್ನ ಪ್ರತ್ಯೇಕ ಕೊರೊನಾ ಆಸ್ಪತ್ರೆಯನ್ನು ಮಾಡಿದ್ದೇವೆ. ಇದು ದೇಶದಲ್ಲಿ ಮೊದಲಾಗಿದೆ ಎಂದು ವಿವರಿಸಿದರು.